Bidar | ಎಸ್ಐಆರ್ ನಲ್ಲಿನ ತೊಡಕು ನಿವಾರಣೆಗೆ ಆಗ್ರಹಿಸಿ ಮನವಿ
ಸೋನ್ಂ ವಾಂಗ್ಚುಕ್ ಅವರ ಪ್ರತಿಭಟನೆಯಲ್ಲಿ ರಾಷ್ಟ್ರಪತಿ ಮಧ್ಯಪ್ರವೇಶಿಸಲು ಒತ್ತಾಯ
ಬೀದರ್: ಎಸ್‌ಐಆರ್ (ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ) ಪ್ರಕ್ರಿಯೆಯಲ್ಲಿನ ತೊಡಕುಗಳನ್ನು ನಿವಾರಿಸಿ ಪರಿಷ್ಕರಣೆ ಅವಧಿಯನ್ನು ಒಂದು ತಿಂಗಳವರೆಗೆ ವಿಸ್ತರಿಸಬೇಕು ಹಾಗೂ ಸಾಮಾಜಿಕ ಹೋರಾಟಗಾರ ಸೋನಂ ವಾಂಗ್ಚುಕ್ ಅವರ ಉಪವಾಸ ಸತ್ಯಾಗ್ರಹದ ವಿಚಾರದಲ್ಲಿ ರಾಷ್ಟ್ರಪತಿಗಳು ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿ ಎಸ್‌ಐಆರ್ ವಿರೋಧಿ ಜನಾಂದೋಲನ ಸಮಿತಿಯು ಶುಕ್ರವಾರ ಜಿಲ್ಲಾಧಿಕಾರಿಗಳ ಮೂಲಕ ಪ್ರತ್ಯೇಕ ಮನವಿಗಳನ್ನು ಸಲ್ಲಿಸಿತು.
ಕೇಂದ್ರ ಮತ್ತು ರಾಜ್ಯ ಮುಖ್ಯ ಚುನಾವಣಾ ಆಯುಕ್ತರು ಹಾಗೂ ಮುಖ್ಯಮಂತ್ರಿಗೆ ಸಲ್ಲಿಸಿದ ಮನವಿಯಲ್ಲಿ, ಉದ್ಯೋಗ ನಿಮಿತ್ತ ವಲಸೆ ಹೋದ ಅನೇಕ ಮತದಾರರು ಎಸ್‌ಐಆರ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಪರಿಷ್ಕರಣೆ ಅವಧಿಯನ್ನು ಕೇವಲ 10 ದಿನಗಳ ಬದಲು ಒಂದು ತಿಂಗಳವರೆಗೆ ವಿಸ್ತರಿಸಬೇಕು ಎಂದು ಆಗ್ರಹಿಸಲಾಗಿದೆ.
ಇದಲ್ಲದೆ, ಬಡವರು ಮತ್ತು ಮಹಿಳೆಯರ ಬಳಿ ಅಗತ್ಯ ದಾಖಲೆಗಳು ಇಲ್ಲದಿರುವ ಹಿನ್ನೆಲೆಯಲ್ಲಿ ಆಧಾರ್ ಕಾರ್ಡ್, ಪಡಿತರ ಚೀಟಿ ಹಾಗೂ ಡ್ರೈವಿಂಗ್ ಲೈಸೆನ್ಸ್‌ಗಳನ್ನೂ ಮತದಾರರ ಪುರಾವೆಯಾಗಿ ಪರಿಗಣಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಇನ್ನೊಂದು ಮನವಿಯನ್ನು ರಾಷ್ಟ್ರಪತಿಗೆ ಸಲ್ಲಿಸಿರುವ ಸಮಿತಿ, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಶಿಕ್ಷಣ ವ್ಯವಸ್ಥೆಯ ಲೋಪದೋಷಗಳನ್ನು ಖಂಡಿಸಿ ಜಂತರ್ ಮಂತರ್‌ನಲ್ಲಿ ಕಳೆದ 19 ದಿನಗಳಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸೋನಂ ವಾಂಗ್ಚುಕ್ ಅವರ ಆರೋಗ್ಯ ಹದಗೆಡುತ್ತಿರುವುದರಿಂದ, ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಅವರ ಬೇಡಿಕೆಗಳಿಗೆ ಸ್ಪಂದಿಸುವಂತೆ ರಾಷ್ಟ್ರಪತಿಗಳು ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದೆ.
ಈ ಸಂದರ್ಭದಲ್ಲಿ ಶ್ರೀಕಾಂತ್ ಸ್ವಾಮಿ, ನಿಜಾಮೋದ್ದಿನ್, ಬಾಬುರಾವ್ ಹೊನ್ನಾ, ಜಗದೀಶ್ವರ್ ಬಿರಾದಾರ್, ಡಾ. ಮಕ್ಸುದಾ ಚಂದಾ, ವಿನಯ್ ಮಾಳಗೆ, ಮಹೇಶ್ ಗೋರನಾಳಕರ್, ರಜಿಯಾ ಬಳಬಟ್ಟೆ, ಸಂದೀಪ್ ಮುಕಿಂದೆ ಹಾಗೂ ಮಚಿಂದ್ರ ವಾಘಮಾರೆ ಸೇರಿದಂತೆ ಇತರರು ಇದ್ದರು.