ಬೀದರ್ ಜಿಲ್ಲೆಯನ್ನು ಬರಪೀಡಿತವೆಂದು ಘೋಷಿಸಲು ದಲಿತ ಸಂಘರ್ಷ ಸಮಿತಿಯಿಂದ ಒತ್ತಾಯ
ಬೀದರ್: ಜಿಲ್ಲಾದ್ಯಂತ ಮುಂಗಾರು ಮಳೆ ಕೈಕೊಟ್ಟ ಪರಿಣಾಮ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಬೀದರ್ ಜಿಲ್ಲೆಯನ್ನು ತಕ್ಷಣವೇ ಬರಪೀಡಿತ ಜಿಲ್ಲೆ ಎಂದು ಘೋಷಿಸಿ ರೈತರ ಹಿತ ಕಾಪಾಡಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ) ಆಗ್ರಹಿಸಿದೆ.
ಈ ಸಂಬಂಧ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದ ಸಮಿತಿಯು, ಮಳೆ ಕೊರತೆಯಿಂದ ರೈತರು ಬಿತ್ತನೆ ಮಾಡಿದ ಬೆಳೆಗಳು ಒಣಗಿ ನಾಶವಾಗುತ್ತಿವೆ ಎಂದು ತಿಳಿಸಿದೆ.
ಬೀಜ, ಗೊಬ್ಬರ ಹಾಗೂ ಕೃಷಿ ಚಟುವಟಿಕೆಗಳಿಗೆ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ, ಸಾಲದ ಹೊರೆ ಹೊತ್ತಿರುವ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಲವರು ಆತ್ಮಹತ್ಯೆಯಂತಹ ದುಡುಕಿನ ನಿರ್ಧಾರಕ್ಕೆ ಮುಂದಾಗುವ ಪರಿಸ್ಥಿತಿಯೂ ನಿರ್ಮಾಣವಾಗಿದ್ದು, ರಾಜ್ಯ ಸರ್ಕಾರ ಕೂಡಲೇ ಬೀದರ್ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ ಜಿಲ್ಲೆಯ ಎಲ್ಲಾ ರೈತರ ಕೃಷಿ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಒತ್ತಾಯಿಸಲಾಗಿದೆ.
ಇದಲ್ಲದೆ, 2025-26ನೇ ಸಾಲಿನ ಬೆಳೆ ವಿಮೆ ಹಾಗೂ ಬರಪೀಡಿತ ಪರಿಹಾರದ ಅನುದಾನ ಮಂಜೂರಾಗಿದ್ದರೂ ತಾಂತ್ರಿಕ ದೋಷಗಳಿಂದ ಜಿಲ್ಲೆಯ ಅನೇಕ ರೈತರಿಗೆ ಹಣ ಇನ್ನೂ ಜಮೆಯಾಗಿಲ್ಲ. ಬಾಕಿ ಉಳಿದಿರುವ ರೈತರಿಗೆ ಕೂಡಲೇ ಬೆಳೆ ವಿಮೆ ಹಾಗೂ ಪರಿಹಾರದ ಮೊತ್ತ ಬಿಡುಗಡೆ ಮಾಡಿ ನೆರವು ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಕೃಷಿಯನ್ನೇ ನಂಬಿಕೊಂಡಿರುವ ರೈತ ಸಮುದಾಯದ ಹಿತದೃಷ್ಟಿಯಿಂದ ಸರ್ಕಾರ ಯಾವುದೇ ವಿಳಂಬ ಮಾಡದೆ ಅಗತ್ಯ ಪರಿಹಾರ ಹಾಗೂ ಆರ್ಥಿಕ ನೆರವು ಒದಗಿಸಬೇಕು ಎಂದು ಸಮಿತಿ ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ಸಮಿತಿಯ ಜಿಲ್ಲಾ ಸಂಚಾಲಕ ಧನರಾಜ್ ಮುಸ್ತಾಪೂರ್, ಜಿಲ್ಲಾ ಸಂಯೋಜಕ ವಿಜಯಕುಮಾರ್ ಐಹೊಳೆ, ಅನೀಲಕುಮಾರ್ ಬಡಿಗೇರ್, ಗುಂಡಪ್ಪಾ ದಂಡೆ, ಔರಾದ್ ತಾಲ್ಲೂಕು ಸಂಚಾಲಕ ಜೈಪ್ರಕಾಶ್ ಅಷ್ಟೂರೆ ಹಾಗೂ ಮಲ್ಲಿಕಾರ್ಜುನ್ ಬಿರಾದಾರ್ ಉಪಸ್ಥಿತರಿದ್ದರು.