ಬೀದರ್ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ, ಪ್ರತಿ ಎಕರೆಗೆ 50 ಸಾವಿರ ರೂ. ಪರಿಹಾರ ನೀಡಲು ಆಗ್ರಹ
ಬೀದರ್: ಮುಂಗಾರು ಮಳೆ ಸಂಪೂರ್ಣವಾಗಿ ಕೈಕೊಟ್ಟ ಪರಿಣಾಮ ಜಿಲ್ಲೆಯ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಬೀದರ್ ಜಿಲ್ಲೆಯನ್ನು ತಕ್ಷಣವೇ ಬರಪೀಡಿತ ಪ್ರದೇಶವೆಂದು ಘೋಷಿಸಿ ಪ್ರತಿ ಎಕರೆಗೆ ₹50 ಸಾವಿರ ಪರಿಹಾರ ನೀಡಬೇಕು ಎಂದು ಆಮ್ ಆದ್ಮಿ ಪಕ್ಷ (ಆಪ್) ಆಗ್ರಹಿಸಿದೆ.
ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಅವರಿಗೆ ಶುಕ್ರವಾರ ಸಲ್ಲಿಸಿದ ಮನವಿಯಲ್ಲಿ, ಪ್ರತಿ ವರ್ಷ ಅತಿವೃಷ್ಟಿ ಅಥವಾ ಅನಾವೃಷ್ಟಿಯಿಂದ ಸಂಕಷ್ಟ ಅನುಭವಿಸುತ್ತಿರುವ ಜಿಲ್ಲೆಯ ರೈತರು ಈ ಬಾರಿ ಮುಂಗಾರು ವೈಫಲ್ಯದಿಂದ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಳೆ ಕೊರತೆಯಿಂದ ಬಿತ್ತನೆ ಮಾಡಿದ ಬೆಳೆಗಳು ಒಣಗಿ ನಾಶವಾಗುತ್ತಿವೆ ಎಂದು ತಿಳಿಸಲಾಗಿದೆ.
ರೈತರು ಸಾಲ ಮಾಡಿ ಬೀಜ, ಗೊಬ್ಬರ ಹಾಗೂ ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಹಣ ವೆಚ್ಚ ಮಾಡಿದ್ದರೂ ಸಮರ್ಪಕ ಮಳೆಯಾಗದ ಕಾರಣ ಬೆಳೆ ಹಾನಿಯಾಗಿದೆ. ಪರಿಣಾಮ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಸಾಲಗಾರರ ಒತ್ತಡದಿಂದ ಆತಂಕದ ವಾತಾವರಣ ನಿರ್ಮಾಣವಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಆದ್ದರಿಂದ ಸರ್ಕಾರ ಕೂಡಲೇ ಬೀದರ್ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ, ಜಿಲ್ಲೆಯ ಪ್ರತಿಯೊಬ್ಬ ರೈತನಿಗೂ ಪ್ರತಿ ಎಕರೆಗೆ 50 ಸಾವಿರ ರೂ. ಪರಿಹಾರ ನೀಡುವ ಮೂಲಕ ಆರ್ಥಿಕ ಸಂಕಷ್ಟದಿಂದ ಪಾರು ಮಾಡಬೇಕು ಎಂದು ಪಕ್ಷ ಒತ್ತಾಯಿಸಿದೆ.
ಬೇಡಿಕೆಗಳನ್ನು ಸರ್ಕಾರ ತಕ್ಷಣ ಈಡೇರಿಸದಿದ್ದರೆ ರೈತರ ಪರವಾಗಿ ಆಮ್ ಆದ್ಮಿ ಪಕ್ಷದಿಂದ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಮನವಿಯಲ್ಲಿ ಎಚ್ಚರಿಕೆ ನೀಡಲಾಗಿದೆ.
ಈ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಸಿದ್ದು ಫುಲಾರಿ, ಓಂಕಾರ್, ವಿಠಲ್, ಸೈಯದ್, ಮೊಹಮ್ಮದ್ ಜಾವಿದ್, ರಾಜಕುಮಾರ್ ಪಾಟೀಲ್, ವೆಂಕಟೇಶ್, ಕಂಟೆಪ್ಪಾ ಗುಪ್ತಾ, ನಂದಿಬಸವ ಪಾಟೀಲ್, ಚಿದಾನಂದ್, ಸೂರ್ಯಕಾಂತ್, ಶಾಂತಕುಮಾರ್, ಡಿ.ಕೆ ಯೊಹಾನ್, ಅಶೋಕ್ ಹಾಗೂ ಪಂಡರಿ ಸೇರಿದಂತೆ ಪಕ್ಷದ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.