ಬೀದರ್ | ಕಾರುಣ್ಯ ಪತ್ತಿನ ಸಹಕಾರಿ ಸಂಘಕ್ಕೆ 13.10 ಲಕ್ಷ ನಿವ್ವಳ ಲಾಭ : ಮುಜ್ತಬಾ ಖಾನ್
ಬೀದರ್: ಜಿಲ್ಲೆಯ ಕಾರುಣ್ಯ ಪತ್ತಿನ ಸಹಕಾರಿ ಸಂಘವು 2024-25ನೇ ಸಾಲಿನಲ್ಲಿ 13.10 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಬಿಎಂಸಿ ಅಧ್ಯಕ್ಷ ಮುಜ್ತಬಾ ಖಾನ್ ಹೇಳಿದರು.
ರವಿವಾರ ನಗರದ ಡಿಸೆಂಟ್ ಫಂಕ್ಷನ್ ಹಾಲ್‌ನಲ್ಲಿ ನಡೆದ ಸಂಘದ ಎಂಟನೇ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿ, ಸಂಘವು ವರ್ಷದಿಂದ ವರ್ಷಕ್ಕೆ ಲಾಭದತ್ತ ಮುನ್ನಡೆಯುತ್ತಿದ್ದು, ಕೋಟ್ಯಂತರ ರೂ. ವಹಿವಾಟು ನಡೆಸುತ್ತಿದೆ ಎಂದು ತಿಳಿಸಿದರು.
ಸಂಘದ ಅಧ್ಯಕ್ಷ ರಫಿಕ್ ಅಹಮ್ಮದ್ ಗಾದಗಿ ಮಾತನಾಡಿ, ಸಂಘವು ವಾರ್ಷಿಕವಾಗಿ 89.15 ಕೋಟಿ ರೂ. ವಹಿವಾಟು ನಡೆಸುತ್ತಿದೆ. ಗ್ರಾಹಕರು ಒಟ್ಟು 37.03 ಕೋಟಿ ರೂ. ಠೇವಣಿ ಇಟ್ಟಿದ್ದಾರೆ. ಮುಂದಿನ ದಿನಗಳಲ್ಲಿ 5,000 ಸದಸ್ಯರನ್ನು ಸೇರಿಸಲಾಗುವುದು ಎಂದು ಮಾಹಿತಿ ನೀಡಿದರು.
ಸಂಘವು ಸಾಲದ ಮೇಲೆ ಬಡ್ಡಿ ವಿಧಿಸುವುದಿಲ್ಲ. ಬದಲಿಗೆ ವ್ಯಾಪಾರ ಸಾಲ ನೀಡಲಾಗುತ್ತಿದ್ದು, ಅದರ ಲಾಭದಲ್ಲಿ ಪಾಲು ಪಡೆಯಲಾಗುತ್ತದೆ. ವಿವಿಧ ವ್ಯಾಪಾರಗಳಿಗೆ ವಿಭಿನ್ನ ಪ್ರಮಾಣದ ಲಾಭ ನಿಗದಿಪಡಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಸಂಘದ ಸಲಹೆಗಾರರು ಇಕ್ಬಾಲ್ ಮುಹಿಯೊದ್ದೀನ್, ಡಾ. ಅಬ್ದುಲ್ ಖದೀರ್, ಮಹಮ್ಮದ್ ಆಸಿಫುದ್ದೀನ್ ಸಂಘದ ಚಟುವಟಿಕೆಗಳ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಸದಸ್ಯರು ಮುಹಮ್ಮದ್ ಜಾವೀದ್, ಮುಹಮ್ಮದ್ ನಿಝಾಮುದ್ದೀನ್, ಉಪಾಧ್ಯಕ್ಷ ಏಹತೆಷಾಮುಲ್ ಹಕ್, ಅಷ್ಫಾಕ್ ಅಹಮ್ಮದ್, ಶೇಖರ್ ಚೌವ್ಹಾಣ್, ಮುಬಾಶಿರ್ ಸಿಂಧೆ, ಸಿಇಒ ಮಸಿಹುದ್ದೀನ್, ಶೋಅಬ್‌ವುಲ್ಲಾ ಖಾನ್, ರಹಮತುಲ್ಲಾ ದೇವವಾಣಿ, ಅಕ್ರಮ್ ಅಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.