ಛತ್ರಪತಿ ಶಿವಾಜಿ ಮೊಘಲರ ವಿರುದ್ಧ ಹೋರಾಡಿದರೆ ವಿನಃ ಮುಸಲ್ಮಾನರ ವಿರುದ್ಧವಲ್ಲ : ಸಚಿವ ಸಂತೋಷ್ ಲಾಡ್
ಬೀದರ್ : ಛತ್ರಪತಿ ಶಿವಾಜಿ ಮಹಾರಾಜ್ ಒಬ್ಬರು ಸೆಕ್ಯುಲರ್ ಲೀಡರ್ ಆಗಿದ್ದು, ಅವರು ಮೊಘಲರ ವಿರುದ್ಧ ಹೊರಾಡಿದರೆ ವಿನಃ ಮುಸಲ್ಮಾನರ ವಿರುದ್ಧವಲ್ಲ. ಇದನ್ನು ನಮ್ಮ ಸಮಾಜದವರು ಅರ್ಥ ಮಾಡಿಕೊಳ್ಳಬೇಕು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಹೇಳಿದರು.
ನಗರದ ಗಣೇಶ್ ಮೈದಾನದಲ್ಲಿ ಆಯೋಜಿಸಿದ 'ಸ್ವಾಭಿಮಾನಿ ಮರಾಠ ಸಮಾವೇಶ ಕಾರ್ಯಕ್ರಮ' ಉದ್ಘಾಟಿಸಿ ಮಾತನಾಡಿದ ಸಂತೋಷ್ ಲಾಡ್, ಛತ್ರಪತಿ ಶಿವಾಜಿ ಮಹಾರಾಜ್ ಅವರ ಸಮಾಧಿ ಶೋಧಿಸಿದವರು ಮಹಾತ್ಮಾ ಜ್ಯೋತಿಬಾ ಫುಲೆ ಅವರಾಗಿದ್ದಾರೆ. ಆದರೆ ಅವರ ಫೋಟೋವನ್ನು ನಾವು ಇಡುವುದಿಲ್ಲ. ಶಿವಾಜಿ ಬಗ್ಗೆ ಮಾತನಾಡುವ ನಾವು ಮಹಾತ್ಮಾ ಜ್ಯೋತಿಬಾ ಫುಲೆ ಅವರನ್ನು ಮರೆಯುವ ಹಾಗಿಲ್ಲ. ಒಂದು ವೇಳೆ ಮಹಾತ್ಮಾ ಜ್ಯೋತಿಬಾ ಫುಲೆ ಅವರು ಇರದಿದ್ದರೆ ಇಂದು ಶಿವಾಜಿ ಬಗ್ಗೆ ನಾವು ಕಾರ್ಯಕ್ರಮ ಮಾಡುತ್ತಿರಲಿಲ್ಲ ಎಂದರು.
ಭಾರತದಲ್ಲಿ ಮೊದಲಿಗೆ ಶಾಹೂ ಮಹಾರಾಜ್ ಅವರು ಶೇ.50 ರಷ್ಟು ಮೀಸಲಾತಿ ನೀಡಿದ್ದರು. ಶಾಹು ಮಹಾರಾಜ್ ಮತ್ತು ಗಾಯಕವಾಡ್ ಮಹಾರಾಜ್ ಅವರು ಅಂಬೇಡ್ಕರ್ ಅವರನ್ನು ಮೀಸಲಾತಿ ನೀಡಿ ಅವರ ಶಿಕ್ಷಣಕ್ಕೆ ಸಹಾಯ ಮಾಡಿದರು. ಆದ್ದರಿಂದ ಅಂಬೇಡ್ಕರ್ ಅವರು ಹೊರದೇಶದಲ್ಲಿ ಶಿಕ್ಷಣ ಪಡೆದರು. ಮರಾಠ ಸಮಾಜದ ಜನರು ಶಿವಾಜಿ ಒಬ್ಬರೇ ಅಲ್ಲ, ಬಸವಣ್ಣ, ಅಂಬೇಡ್ಕರ್, ಫುಲೆ ಹಾಗೂ ಎಲ್ಲ ಮಹಾ ಪುರುಷರ ಜಯಂತಿ ಮಾಡಬೇಕು. ಹಾಗೆಯೇ ಶಿವಾಜಿ ಜಯಂತಿ ಕೂಡ ಬೇರೆ ಸಮುದಾಯದವರು ಆಚರಣೆ ಮಾಡಬೇಕು ಎಂದು ಹೇಳಿದರು.
ಎಲ್ಲಾ ರಾಜಕೀಯ ಪಕ್ಷದಲ್ಲಿರುವ ಮರಾಠ ಸಮುದಾಯದ ನಾಯಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಅವರು ಯಾವುದೇ ರಾಜಕೀಯ ಪಕ್ಷದಲ್ಲಿರಲಿ ಆದರೆ ಆ ರಾಜಕೀಯ ನಮ್ಮ ಸಮಾಜದಲ್ಲಿ ತರುವುದು ಬೇಡ ಎಂದು ಮನವಿ ಮಾಡಿದ ಅವರು, ಮರಾಠಾ ಸಮಾಜದ ಅಭಿವೃದ್ಧಿಗಾಗಿ ಜಿಜಾ ಮಾತಾ ಟ್ರಸ್ಟ್ ಸ್ಥಾಪಿಸಿ ಅದರ ವೃದ್ಧಿಗೆ ಬೇಕಾಗುವ ಎಲ್ಲಾ ರೀತಿ ಸಹಕಾರ ನೀಡುತ್ತೇನೆ. ಈ ಟ್ರಸ್ಟ್ ಮೂಲಕ ಮರಾಠ ಸಮಾಜದ ಏಳಿಗೆಗೆ ಶ್ರಮಿಸೋಣ ಎಂದು ಹೇಳಿದರು.
ಮರಾಠಾ ಸಮಾಜದ ಮುಖಂಡ ಪದ್ಮಾಕರ ಪಾಟೀಲ್ ಅವರು ಮಾತನಾಡಿ, ಸಚಿವ ಸಂತೋಷ್ ಲಾಡ್ ಅವರ ಜೊತೆ ಇವತ್ತು ಎಲ್ಲಾ ಮರಾಠಿಗರು ಪಕ್ಷಬೇಧ ಮರೆತು ಜೊತೆಗೆ ನಿಂತಿದ್ದಾರೆ. ಸಂತೋಷ ಲಾಡ್ ಅವರು ಕರ್ನಾಟಕದ ಉದ್ದಗಲಕ್ಕೂ ಸಾಕಷ್ಟು ಹೆಸರು ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಮುಖ್ಯಮಂತ್ರಿ ಆಗಬೇಕು ಎನ್ನುವುದು ಆಸೆ ಇದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ವೇಳೆ ಪುಣೆಯ ದಾದ ಮಹರಾಜ್ ನಾಗರಕರ್ ಅವರು ಜನರಿಗೆ ತಮ್ಮ ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಮರಾಠ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಚ್ ಮರಿಯೋಜಿರಾವ್, ಕ್ಷತ್ರಿಯ ಮರಾಠಾ ಸಮಾಜದ ಅಧ್ಯಕ್ಷ ಸುರೇಶರಾವ್ ಸಾಟೆ, ಸಮಾಜದ ಮುಖಂಡರಾದ ಬಾಬುರಾವ ಕಾರಬಾರಿ, ಪ್ರಕಾಶ ಪಾಟೀಲ್, ದಿಗಂಬರ ಮಾನಕೇರಿ, ಬಾಬುರಾವ ಬಿರಾದಾರ, ಪ್ರಕಾಶ ಪಾಟೀಲ್, ಜನಾರ್ಧನರಾವ್ ಬಿರಾದಾರ, ವಿ.ಟಿ. ಸಿಂಗ್, ನಾರಾಯಣ ಗಣೇಶ, ಅನಿಲ ಕಾಳೆ, ಪಾಂಡುರಂಗ ಕನಸೆ, ಆನಂದ ಜನತಾಪ, ಪ್ರದೀಪ ಬಿರಾದಾರ, ಗೊರಖ ಶಿರಿಮೊಳೆ ಸೇರಿದಂತೆ ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿದ ಮರಾಠಾ ಸಮುದಾಯದ ಪುರುಷರು, ಮಹಿಳೆಯರು, ಯುವಕರು ಹಾಗೂ ಮಕ್ಕಳು ಉಪಸ್ಥಿತರಿದ್ದರು.