ಬೀದರ್: ಮಾಲಿನ್ಯ ಉಂಟು ಮಾಡುತ್ತಿರುವ ಕಾರ್ಖಾನೆಗಳನ್ನು ಬಂದ್ ಮಾಡಲು ಆಗ್ರಹಿಸಿ ಪ್ರತಿಭಟನೆ
ಬೀದರ್ : ಮಾಲಿನ್ಯ ಮಾಡುತ್ತಿರುವ ಹುಮನಾಬಾದ್‌ನಲ್ಲಿನ ಕಾರ್ಖಾನೆಗಳನ್ನು ಬಂದ್ ಮಾಡುವ ಮೂಲಕ ಗುರುಗಂಗಾ ಕೆರೆಯನ್ನು ಉಳಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.
ಹುಮನಾಬಾದ್‌ನಿಂದ ರೈಲ್ವೆ ಮೂಲಕ ಆಗಮಿಸಿದ ನೂರಾರು ಜನರು, ನಗರದ ರೈಲ್ವೆ ನಿಲ್ದಾಣದಿಂದ ಪ್ರತಿಭಟನಾ ಮೆರವಣಿಗೆ ಪ್ರಾರಂಭಿಸಿ, ಹರಳಯ್ಯ ವೃತ್ತ, ಅಂಬೇಡ್ಕರ್ ವೃತ್ತ, ಮಡಿವಾಳ ವೃತ್ತದ ಹಾಗೂ ಕೇಂದ್ರ ಬಸ್ ನಿಲ್ದಾಣದ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ತಲುಪಿದರು. ಪ್ರತಿಭಟನೆಯಲ್ಲಿ ʻಮಾಲಿನ್ಯ ಮಾಡುತ್ತಿರುವ ಕಾರ್ಖಾನೆಗಳನ್ನು ಬಂದ್ ಮಾಡಬೇಕುʼ, ʻಮಾಲಿನ್ಯ ತಡೆಯಿರಿ, ಗುರುಗಂಗಾ ಉಳಿಸಿʼ ಎನ್ನುವ ಘೋಷಣೆಗಳನ್ನು ಕೂಗಲಾಯಿತು.
ಈ ವೇಳೆ ಮಾತನಾಡಿದ ಆನಂದರಾಜ್ ಮಹಾರಾಜ್ ಅವರು, ಕೆಲವು ಕಂಪನಿಗಳಿಗೆ ಕ್ಲೋಸರ್ ಕೊಟ್ಟ ಮೇಲೂ ಕೋರ್ಟ್‌ಗೆ ಹೋಗಿ ರಿಲೀಫ್ ತಂದು ಮತ್ತೆ ಪ್ರಾರಂಭ ಮಾಡುತ್ತಿದ್ದಾರೆ. ಹಾಗಾಗಿ ಇದನ್ನ ಸಂಪೂರ್ಣ ಬಂದ್ ಮಾಡಲು ನಮ್ಮ ಆಗ್ರಹವಾಗಿದೆ. ರೆಡ್ ಜೋನ್‌ನಲ್ಲಿರುವ ಪ್ರತಿಯೊಂದು ಕಂಪನಿ ಕೂಡ ಬಂದ್ ಆಗಬೇಕು ಎನ್ನುವುದು ನಮ್ಮ ಒತ್ತಾಯವಾಗಿದೆ ಎಂದರು.
ಮಾಜಿ ಸಚಿವ ರಾಜಶೇಖರ್ ಪಾಟೀಲ್ ಅವರು ಮಾತನಾಡಿ, ಗುರುಗಂಗಾ ಉಳಿಸಲು ಆಗ್ರಹಿಸಿ ಹುಮಾನಾಬಾದ್-ಕಲ್ಬುರ್ಗಿ ರಸ್ತೆಯನ್ನು ನಾವು ಬಂದ್ ಮಾಡಿ ಪ್ರತಿಭಟನೆ ನಡೆಸಿದಾಗ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ ಹಾಗೂ ಎಸ್ಪಿ ಸೇರಿದಂತೆ ಕೆಲ ಅಧಿಕಾರಿಗಳು ಭೇಟಿ ನೀಡಿದ್ದರು. ಆವಾಗ ರೆಡ್ ಝೋನ್‌ನಲ್ಲಿರುವ 15 ಕಾರ್ಖಾನೆಗಳು ಬಂದ್ ಆಗಬೇಕು ಎಂದು ಮನವಿ ಮಾಡಿದ್ದೇವೆ ಎಂದರು.
ನಮ್ಮ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ಆರ್ಟಿಕಲ್ 133 ಉಪಯೋಗಿಸಿ ಕಾನೂನು ಚೌಕಟ್ಟಿನಲ್ಲಿರದ ಕಾರ್ಖಾನೆಗಳನ್ನು ನಾವು ಬಂದ್ ಮಾಡಿದ್ದೇವೆ. ಆದರೆ, ಕೆಲವೊಬ್ಬರು ಕೋರ್ಟ್‌ಗೆ ಹೋಗಿ ಸ್ಟೇ ತಂದಿದ್ದಾರೆ. ಅದರ ಬಗ್ಗೆ ಚರ್ಚೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಇದರ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಅರಣ್ಯ ಸಚಿವರಿಗೆ ಮಾಹಿತಿ ನೀಡಿ ನಾನು ಚರ್ಚೆ ಮಾಡುತ್ತೇನೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ್, ಕಾಂಗ್ರಸ್ ಪಕ್ಷದ ಜಿಲ್ಲಾಧ್ಯಕ್ಷ ಅಬ್ದುಲ್ ಮನ್ನಾನ್ ಸೇಠ್, ಮಾಜಿ ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ್ ಅರಳಿ, ಚೇತನ್ ರಾಜ್ ಮಹಾರಾಜ್, ಸುನಿಲ್ ಪಾಟೀಲ್, ಅಭಿಷೇಕ್ ಪಾಟೀಲ್, ನವೀನ್ ಬತ್ತಲಿ, ಓಂಕಾರ್ ತುಂಬಾ, ಸುರೇಶ್ ಸೀಗಿ, ಅಭಿಷೇಕ್ ಪಾಟೀಲ್, ಲಕ್ಷ್ಮಣ್ ಸಿಂಗೆ, ವಿನೋದ್, ಶೇಕ್ ಮುರ್ತುಜ್, ಕಿರಣ್ ಕುಲಕರ್ಣಿ, ಬಾಬುರಾವ್ ತುಂಬಾ ಹಾಗೂ ಪ್ರಭು ಪಾಂಚಾಳ್ ಸೇರಿದಂತೆ ಗಡವಂತಿ, ಮಾಣಿಕನಗರ, ಧೂಮ್ಮನಸೂರ್, ಮೊಳಕೇರಾ ಗ್ರಾಮಸ್ಥರು ಉಪಸ್ಥಿತರಿದ್ದರು.