Bidar | ಯುವ ಸಮೂಹ ಪುಸ್ತಕ ಓದುವ ಅಭಿರುಚಿ ಬೆಳೆಸಿಕೊಳ್ಳಲಿ: ರಾಜೇಶ್ ಸಿಂಧೆ
ಬೀದರ್: ಯುವ ಸಮೂಹ ಪುಸ್ತಕ ಓದುವ ಅಭಿರುಚಿಯನ್ನು ಮೈಗೂಡಿಸಿಕೊಂಡರೆ ಮಾನವೀಯ ಮೌಲ್ಯಗಳು ಬೆಳೆಯಲು ಸಾಧ್ಯವಾಗುತ್ತದೆ ಎಂದು ಪತ್ರಕರ್ತ ರಾಜೇಶ್ ಸಿಂಧೆ ಅಭಿಪ್ರಾಯಪಟ್ಟರು.
ನಗರದ ಕುಂಬಾರವಾಡ ಬಡಾವಣೆಯ ಸಾಹಿತಿ, ಶಿಕ್ಷಕ ಸಂಜೀವಕುಮಾರ್ ಅತಿವಾಳೆ ಅವರ ನಿವಾಸದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು, ಜಿಲ್ಲಾ ಜಾಗೃತ ಸಮಿತಿ, ಬೀದರ್ ಹಾಗೂ ಜನಪರ ಸಾಂಸ್ಕೃತಿಕ ಪ್ರತಿಷ್ಠಾನ ಸಹಯೋಗದಲ್ಲಿ ಆಯೋಜಿಸಿದ್ದ ‘ಮನೆಗೊಂದು ಗ್ರಂಥಾಲಯ’ ಅನುಷ್ಠಾನ ಸಮಾರಂಭ ಹಾಗೂ ಕವಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಆಧುನಿಕ ತಂತ್ರಜ್ಞಾನ ಬೆಳೆದಂತೆ ಪುಸ್ತಕ ಓದುವ ಸಂಸ್ಕೃತಿ ಕುಗ್ಗುತ್ತಿರುವ ಈ ಸಂದರ್ಭದಲ್ಲಿ ತಂತ್ರಜ್ಞಾನವನ್ನು ಸದ್ಬಳಕೆ ಮಾಡಿಕೊಂಡು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಮೌಲ್ಯಯುತ ಕೃತಿಗಳು ಹಲವು ಚಳವಳಿಗಳಿಗೆ ಸ್ಫೂರ್ತಿದಾಯಕವಾಗಿವೆ ಎಂದರು.
ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ್ ಸೋನಾರೆ ಮಾತನಾಡಿ, ನಮ್ಮ ಭಾಗದಲ್ಲಿ ಅನೇಕ ಪ್ರತಿಭಾನ್ವಿತ ಲೇಖಕರಿದ್ದರೂ ಅವರ ಸಾಹಿತ್ಯವನ್ನು ರಾಜ್ಯಮಟ್ಟದಲ್ಲಿ ಗುರುತಿಸುವ ಕೆಲಸ ನಡೆಯುತ್ತಿಲ್ಲ. ಬರಹಗಾರರು ಹೆಚ್ಚು ಅಧ್ಯಯನದಲ್ಲಿ ತೊಡಗಿ ಗಟ್ಟಿಯಾದ ಸಾಹಿತ್ಯ ಹೊರತರಲು ಮುಂದಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಂಜೀವಕುಮಾರ್ ಅತಿವಾಳೆ ಮಾತನಾಡಿ, ಬೀದರ್ ಜಿಲ್ಲೆಯಲ್ಲಿರುವ ಪ್ರತಿಭಾನ್ವಿತ ಸಾಹಿತಿಗಳು ಹಾಗೂ ಲೇಖಕರನ್ನು ಗುರುತಿಸುವ ಕೆಲಸ ಹೆಚ್ಚಾಗಿ ನಡೆಯಬೇಕಿದೆ. ಕಾವ್ಯ, ಕಥೆ ಹಾಗೂ ಕಮ್ಮಟಗಳ ಮೂಲಕ ಹೊಸ ತಲೆಮಾರಿನ ಯುವಕರನ್ನು ಬರವಣಿಗೆಗೆ ಸಜ್ಜುಗೊಳಿಸುವುದು ಅಗತ್ಯವಿದೆ. ಉತ್ತಮ ಓದುಗರಿಂದ ಮಾತ್ರ ಮೌಲ್ಯಯುತ ಪುಸ್ತಕಗಳು ಹೊರಬರಲು ಸಾಧ್ಯ ಎಂದು ತಿಳಿಸಿದರು.
ನಿವೃತ್ತ ಪ್ರಾಚಾರ್ಯ ಮುಹಮ್ಮದ್ ನಿಜಾಮುದ್ದೀನ್ ಮಾತನಾಡಿ, ಓದುವ ಹವ್ಯಾಸವು ಮನಸ್ಸಿನ ಏಕಾಗ್ರತೆ, ನೆಮ್ಮದಿ ಹಾಗೂ ಜ್ಞಾನವನ್ನು ವೃದ್ಧಿಸುತ್ತದೆ. ಎಲ್ಲೆಡೆ ಮನೆಗೊಂದು ಪುಸ್ತಕಾಲಯವಾಗಬೇಕು. ಉತ್ತಮ ವ್ಯಕ್ತಿತ್ವ ವಿಕಸನಕ್ಕೆ ನಿರಂತರ ಅಧ್ಯಯನ ಅಗತ್ಯವಿದೆ ಎಂದು ನುಡಿದರು.
‘ಮನೆಗೊಂದು ಗ್ರಂಥಾಲಯ’ ಜಿಲ್ಲಾ ಜಾಗೃತ ಸಮಿತಿಯ ಸಂಚಾಲಕ ಬಾಲಾಜಿ ಕುಂಬಾರ್ ಮಾತನಾಡಿ, ಪುಸ್ತಕಗಳು ನಮ್ಮ ಉತ್ತಮ ಸ್ನೇಹಿತರಿದ್ದಂತೆ. ಎಲ್ಲರ ಮನೆಯಲ್ಲಿ ದೇವರ ಕೋಣೆ ಇರುವಂತೆ ಗ್ರಂಥಾಲಯ ನಿರ್ಮಾಣಕ್ಕೂ ಜಾಗ ಮೀಸಲಿಡಬೇಕು ಎಂದು ತಿಳಿಸಿದರು.
ಸಾಹಿತಿ ನಾಗಶೆಟ್ಟಿ ಪಾಟೀಲ್ ಗಾದಗಿ ಮಾತನಾಡಿ, ಆಧುನಿಕ ತಂತ್ರಜ್ಞಾನದ ನಡುವೆಯೂ ಪುಸ್ತಕ ಓದುವ ಅಭ್ಯಾಸ ಅಗತ್ಯವಿದೆ. ಪ್ರತಿದಿನ ಸ್ವಲ್ಪ ಸಮಯವನ್ನು ಓದಿಗೆ ಮೀಸಲಿಡಬೇಕು ಎಂದರು.
ಕಾರ್ಯಕ್ರಮದಲ್ಲಿ ಆಯೋಜಿಸಿದ್ದ ಕವಿಗೋಷ್ಠಿಯಲ್ಲಿ ಕವಿಗಳಾದ ಜಗದೀಶ್ವರ್ ಬಿರಾದಾರ್, ಅಶ್ವಜೀತ್ ದಂಡೀನ್, ಚನ್ನಬಸವ ಭೂರೆ, ತುಕಾರಾಮ್ ರಾಜನಾಳೆ, ಎಚ್.ಬಿ. ಪ್ರಿಯಾಂಕಾ, ಉಮಾಕಾಂತ್ ವಿಳಾಸಪುರೆ, ಸುಜಾತಾ ಹೊಸಮನಿ ಹಾಗೂ ಅವಿನಾಶ್ ಸೋನೆ ಸ್ವರಚಿತ ಕವಿತೆಗಳನ್ನು ವಾಚಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಶಂಭುಲಿಂಗ ವಾಲ್ದೊಡ್ಡಿ, ಆರ್.ಎಸ್. ಬಿರಾದರ್, ನಿರಂಹಕಾರ ಬಂಡಿ ಹಾಗೂ ಲಕ್ಷ್ಮಣ್ ಮೇತ್ರೆ ಸೇರಿದಂತೆ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.