ಬೀದರ್: ಸಾಹಿತ್ಯವು ಆತ್ಮಸಂತೋಷ ನೀಡುವುದರ ಜೊತೆಗೆ ಸಮಾಜದ ನೋವು–ನಲಿವುಗಳಿಗೆ ಸ್ಪಂದಿಸುವ ಕಾರ್ಯವನ್ನೂ ಮಾಡಬೇಕು. ಕಾಲದಿಂದ ಕಾಲಕ್ಕೆ ಸಾಗಿಬಂದ ಕಾವ್ಯ ಹಾಗೂ ಸಾಹಿತ್ಯ ಕೃತಿಗಳು ಸಮಾಜಮುಖಿ ಚಿಂತನೆಗಳನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಿವೆ ಎಂದು ಹಿರಿಯ ಪತ್ರಕರ್ತ ಶಶಿಕಾಂತ್‌ ಶೆಂಬೆಳ್ಳಿ ಅವರು ಹೇಳಿದರು.

ನಗರದ ಕುಂಬಾರವಾಡ ರಸ್ತೆಯ ಅತಿವಾಳೆ ಸಾಂಸ್ಕೃತಿಕ ಸಭಾಂಗಣದಲ್ಲಿ ರವಿವಾರ ಜನಪರ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಒಂದು ದಿನದ ʻಕಾವ್ಯ ಕಮ್ಮಟʼವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಖಡ್ಗಕ್ಕಿಂತ ಲೇಖನಿ ಹರಿತ’ ಎಂಬ ಮಾತಿನಂತೆ ಬರಹಕ್ಕೆ ತನ್ನದೆಯಾದ ಶಕ್ತಿ ಮತ್ತು ಮಹತ್ವವಿದೆ. ಯಾವುದೇ ಚಳವಳಿಯು ಜನಮಾನಸವನ್ನು ತಲುಪಿ ಜನಪ್ರಿಯತೆ ಗಳಿಸುವಲ್ಲಿ ಕಾವ್ಯ ಹಾಗೂ ಸಾಹಿತ್ಯದ ಪಾತ್ರ ಮಹತ್ವದ್ದಾಗಿದೆ. ಲೇಖನಿಯ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಿ, ಬದಲಾವಣೆಗೆ ದಾರಿ ಮಾಡಿಕೊಡಬಹುದು ಎಂದರು.

ಹಿರಿಯ ಸಾಹಿತಿ ಡಾ. ಎಸ್.ಎಂ. ಜನವಾಡಕರ್ ಅವರು ಮಾತನಾಡಿ, ಕಾವ್ಯ ರಚಿಸುವಾಗ ಬದುಕಿನ ಸಮಗ್ರ ಅನುಭವ ಹಾಗೂ ಆಳವಾದ ಅರಿವು ಅಗತ್ಯವಾಗಿದೆ. ಕಾವ್ಯವು ಸ್ಪಷ್ಟ, ನಿಖರ ಹಾಗೂ ಅರ್ಥಪೂರ್ಣವಾಗಿರಬೇಕು. ಸಮಾಜವನ್ನು ಕಟ್ಟುವ ಮತ್ತು ಮೌಲ್ಯಗಳನ್ನು ಬೆಳೆಸುವಂತಹ ಕಾವ್ಯಗಳು ಇಂದಿನ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಹಿರಿಯ ಸಾಹಿತಿ ಪಾರ್ವತಿ ಸೋನಾರೆ ಅವರು ಮಾತನಾಡಿ, ಯಾವುದೇ ವಿಷಯ ಮನಸ್ಸನ್ನು ಕಾಡಿದಾಗ ಕಾವ್ಯ ಹುಟ್ಟಿಕೊಳ್ಳುತ್ತದೆ. ಹೊಸ ಬರಹಗಾರರ ಮುಂದೆ ಹಲವು ಸವಾಲುಗಳಿದ್ದು, ಸರಳ ಪದಗಳನ್ನೇ ಬಳಸಿಕೊಂಡು ಅರ್ಥಪೂರ್ಣ ಹಾಗೂ ಉತ್ತಮ ಕಾವ್ಯ ರಚಿಸಬಹುದು. ಇಂದಿನ ಕವಿಗಳು ಹೊಸ ವಿಚಾರಗಳು ಹಾಗೂ ಹೊಸ ದಿಕ್ಕಿನತ್ತ ದೃಷ್ಟಿ ಹರಿಸುವುದು ಅಗತ್ಯ ಎಂದು ತಿಳಿಸಿದರು.

ಜನಪರ ಸಾಂಸ್ಕೃತಿಕ ಪ್ರತಿಷ್ಠಾನದ ಸಂಚಾಲಕ ಡಾ. ಸಂಜೀವಕುಮಾರ್‌ ಅತಿವಾಳೆ ಅವರು ಮಾತನಾಡಿ, ಕಾವ್ಯವು ಕೇವಲ ಪದಗಳ ಜೋಡಣೆಯಾಗದೆ ಕವಿಯ ಅನುಭವ, ಭಾವನೆ ಹಾಗೂ ಸಾಮಾಜಿಕ ಕಾಳಜಿಯನ್ನು ಪ್ರತಿಬಿಂಬಿಸಬೇಕು. ಹೊಸ ತಲೆಮಾರಿನ ಬರಹಗಾರರು ತಮ್ಮದೇ ಆದ ಚಿಂತನೆ ಮತ್ತು ಸೃಜನಶೀಲತೆಯ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಹೊಸತನ ತರಬೇಕು ಎಂದು ಹೇಳಿದರು.

ಈ ವೇಳೆ ಹಿರಿಯ ಕನ್ನಡಾಭಿಮಾನಿ ಜಿ. ಬಾಬುರಾವ್, ಕಸಾಪ ಬೀದರ್ ತಾಲ್ಲೂಕಾಧ್ಯಕ್ಷ ಟಿ.ಎಂ. ಮಚ್ಚೆ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಮಾಣಿಕ್ ನೆಳಗಿ, ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಭಾರತಿ ವಸ್ತ್ರದ, ಹಿರಿಯ ಸಾಹಿತಿಗಳಾದ ಪುಷ್ಪಾ ಕನಕ, ಸಾಧನಾ ರಂಜೋಳಕರ್, ಬಸವರಾಜ್‌ ಮಯೂರ ಹಾಗೂ ನಿವೃತ್ತ ಮುಖ್ಯಗುರು ರಘುನಾಥ್ ಭೂರೆ, ‌ಹಿರಿಯ ಕಲಾವಿದ ಶಂಭುಲಿಂಗ್‌ ವಾಲ್ದೊಡ್ಡಿ ಹಾಗೂ ಗಾಯಕಿ ರೇಣುಕಾ ಎನ್.ಬಿ ಸೇರಿದಂತೆ ಜಿಲ್ಲೆಯ ಸಾಹಿತಿಗಳು, ಯುವ ಬರಹಗಾರರು, ಕನ್ನಡಾಭಿಮಾನಿಗಳು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು. ಅವಿನಾಶ್ ಸ್ವಾಗತಿಸಿದರು. ಸುನೀತಾ ಕೂಡ್ಲಿಕರ್ ನಿರೂಪಿಸಿದರು. ರಾಜು ಪವಾರ್‌ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor