Bidar | ಎಚ್‌ಐವಿ ಬಾಧಿತರು ಭಯಪಡದೆ ನಿಯಮಿತ ಔಷಧ ಸೇವಿಸಿ: ಸುಬ್ಬಯ್ಯ ಗುತ್ತೇದಾರ
ಬೀದರ್: ಎಚ್‌ಐವಿ ಬಾಧಿತರು ಯಾವುದೇ ರೀತಿಯ ಭಯ, ಆತಂಕಕ್ಕೆ ಒಳಗಾಗದೆ ನಿಯಮಿತವಾಗಿ ಔಷಧ ಸೇವಿಸಬೇಕು. ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ದೈನಂದಿನ ಸಮತೋಲಿತ ಆಹಾರದ ಜೊತೆಗೆ ವ್ಯಾಯಾಮವನ್ನು ರೂಢಿಸಿಕೊಳ್ಳಬೇಕು ಎಂದು ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ಮೀಟೋ ಅಧಿಕಾರಿ ಸುಬ್ಬಯ್ಯ ಗುತ್ತೇದಾರ ಹೇಳಿದರು.
ನಗರದ ಡಿಎಚ್‌ಒ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‌ಷನ್ ಸೊಸೈಟಿ, ಬೆಂಗಳೂರು, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ, ಬೀದರ್ ಹಾಗೂ ಲಾಲ್ ಬಹದ್ದೂರ್ ಶಿಕ್ಷಣ ಸಂಸ್ಥೆಯ ಸಿಎಸ್‌ಸಿ ಯೋಜನೆ, ಬೀದರ್ ವತಿಯಿಂದ ಆಯೋಜಿಸಿದ್ದ ಪಿಎಲ್‌ಎಚ್‌ಐವಿ ಅನುಭವ ಹಂಚಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಯಾವುದೇ ರೀತಿಯ ಕಳಂಕ ಮತ್ತು ಅಸಮಾನತೆಯನ್ನು ಎದುರಿಸಿದರೆ, ಅದಕ್ಕೆ ಲಭ್ಯವಿರುವ ಉಚಿತ ಕಾನೂನು ನೆರವನ್ನು ಕೂಡ ಪಡೆಯಬಹುದಾಗಿದೆ ಎಂದರು.
ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕದ ಜಿಲ್ಲಾ ಮೇಲ್ವಿಚಾರಕ ಸೂರ್ಯಕಾಂತ್ ಸಂಗೂಳಕರ್ ಮಾತನಾಡಿ, ಸಮಾಜದಲ್ಲಿ ಪ್ರತಿಯೊಬ್ಬರೂ ಉತ್ತಮ ರೀತಿಯಲ್ಲಿ ಜೀವನ ನಡೆಸಲು ಅವಕಾಶವಿದೆ. ಎಚ್‌ಐವಿಗೆ ಒಳಪಟ್ಟವರು ಯಾವುದೇ ಮುಜುಗರಕ್ಕೆ ಒಳಗಾಗದೆ ಧೈರ್ಯದಿಂದ ಜೀವನ ನಡೆಸಬೇಕು ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಭಿವೃದ್ಧಿ ನಿರೀಕ್ಷಕಿ ಯಲ್ಲಮ್ಮ ಮಾತನಾಡಿ, ಸರ್ಕಾರದ ಕಲ್ಯಾಣ ಯೋಜನೆಗಳು, ಅರ್ಹತೆ ಹಾಗೂ ಆರ್ಥಿಕ ಮತ್ತು ಸಾಮಾಜಿಕ ಯೋಜನೆಗಳ ಪ್ರಯೋಜನ ಪಡೆದುಕೊಳ್ಳುವ ಮೂಲಕ ಸ್ವಾವಲಂಬಿ ಬದುಕು ಸಾಗಿಸಲು ಮುಂದಾಗಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಆರ್‌ಟಿ ವೈದ್ಯಾಧಿಕಾರಿ ಡಾ. ಮಹೇಶ್ ರೆಡ್ಡಿ, ಕ್ಲಸ್ಟರ್ ಪ್ರಿವೆನ್‌ಷನ್ ಆಫೀಸರ್ ಶಿವಶಂಕರ್ ಬೆಮಳಗಿ, ಮೊಬಿಲೈಜೇಷನ್ ಫಾರ್ ಏಡ್ಸ್ ಸುರಕ್ಷಾ ಜಿಲ್ಲಾ ಸಹಯೋಗಿ ವಿಶ್ವನಾಥ್ ಸ್ವಾಮಿ, ಎಆರ್‌ಟಿ ಆಪ್ತ ಸಮಾಲೋಚಕ ಸಂತೋಷ್ ಸಿಂಧೆ, ಐಸಿಟಿಸಿ ಆಪ್ತ ಸಮಾಲೋಚಕ ಅರವಿಂದ್ ಕುಲಕರ್ಣಿ ಹಾಗೂ ಸಿಎಸ್‌ಸಿ ಕೋಆರ್ಡಿನೇಟರ್ ಶಿವಕುಮಾರ್ ಮಾಳೆದೊಡ್ಡಿ ಉಪಸ್ಥಿತರಿದ್ದರು.