ಹುಲಸೂರು | ಕೇಬಲ್ ವೈರ್ ಕಳವು ಪ್ರಕರಣ: ಇಬ್ಬರ ಬಂಧನ
ಹುಲಸೂರು: ಮಾಂಜ್ರಾ ನದಿ ದಡದಲ್ಲಿ ನೀರಿನ ಮೋಟಾರ್‌ಗಳಿಗೆ ಅಳವಡಿಸಿದ್ದ ಕೇಬಲ್ ವೈರ್‌ಗಳನ್ನು ಕಳವು ಮಾಡಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೇಹಕರ್ ಪೊಲೀಸ್ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 1,090 ಮೀಟರ್ ಕೇಬಲ್ ವೈರ್ ಹಾಗೂ ಕೃತ್ಯಕ್ಕೆ ಬಳಸಿದ್ದ ಇಕೋ ವಾಹನವನ್ನು ಜಪ್ತಿ ಮಾಡಲಾಗಿದೆ.
ಬಂಧಿತ ಆರೋಪಿಗಳನ್ನು ನಿಲಂಗಾ ಮೂಲದ ಸಚಿನ್ ಹಾಗೂ ಯಶವಂತ್ ಎಂದು ಗುರುತಿಸಲಾಗಿದೆ.
ಸೆ.14ರಂದು ಕೊಂಗಳಿ ಗ್ರಾಮದ ಹೊಲದಲ್ಲಿ 350 ಮೀಟರ್, ಸೆ.21ರಂದು ಹಲಸಿತುಗಾಂವ್ ಗ್ರಾಮದ ಹೊಲದಲ್ಲಿ 365 ಮೀಟರ್ ಹಾಗೂ ಸೆ.25ರಂದು ವಾಂಜರಖೇಡ ಗ್ರಾಮದ ಹೊಲದಲ್ಲಿ 195 ಮೀಟರ್ ಕೇಬಲ್ ವೈರ್ ಕಳವು ಮಾಡಲಾಗಿತ್ತು. ಈ ಕುರಿತು ಮೇಹಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದವು.
ಪ್ರಕರಣಗಳ ತನಿಖೆ ಕೈಗೊಂಡ ಪೊಲೀಸರು ಶನಿವಾರ (ಅ.3) ಆರೋಪಿಗಳನ್ನು ಬಂಧಿಸಿದ್ದಾರೆ. ಮೂರು ಪ್ರಕರಣಗಳಿಗೆ ಸಂಬಂಧಿಸಿದಂತೆ ಅಂದಾಜು 1.80 ಲಕ್ಷ ರೂ. ಮೌಲ್ಯದ ಒಟ್ಟು 1,090 ಮೀಟರ್ ಕೇಬಲ್ ವೈರ್ ಹಾಗೂ 5 ಲಕ್ಷ ರೂ. ಮೌಲ್ಯದ ಕೃತ್ಯಕ್ಕೆ ಬಳಸಿದ್ದ ಇಕೋ ವಾಹನವನ್ನು ಜಪ್ತಿ ಮಾಡಿದ್ದಾರೆ.
ಎಸ್ಪಿ ಪ್ರದೀಪ್ ಗುಂಟಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ್ ಪೂಜಾರಿ, ಡಿವೈಎಸ್ಪಿ ಬಲ್ಲಪ್ಪ ನಂದಗಾವಿ ಹಾಗೂ ಸಿಪಿಐ ಹಣಮರೆಡ್ಡೆಪ್ಪ ಅವರ ಮಾರ್ಗದರ್ಶನದಲ್ಲಿ ಮೇಹಕರ್ ಠಾಣೆಯ ಪಿಎಸ್‌ಐ ಸುದರ್ಶನರೆಡ್ಡಿ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು.