ಬೀದರ್ | ನಮ್ಮ ಜಿಲ್ಲೆ ವಚನದಂಥ ಶ್ರೇಷ್ಠ ಸಾಹಿತ್ಯ ನೀಡಿದ ನೆಲ, ಇಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ : ಸಚಿವ ಈಶ್ವರ್ ಖಂಡ್ರೆ
ಬೀದರ್ : ನಮ್ಮ ಜಿಲ್ಲೆ ಕಲೆ, ಸಾಹಿತ್ಯ, ಸಂಸ್ಕೃತಿಗಳ ಬೀಡಾಗಿದೆ. ವಚನ ಸಾಹಿತ್ಯದಂಥ ಶ್ರೇಷ್ಠ ಸಾಹಿತ್ಯ ನೀಡಿದ ನೆಲವಾಗಿದ್ದು, ಇಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ ಎಂದು ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ಅಭಿಪ್ರಾಯಪಟ್ಟರು.
ನಗರದ ಡಾ.ಚೆನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಕಲ್ಯಾಣ ಕರ್ನಾಟಕ ಕಲಾವಿದರ ಸಂಘ, ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇವರ ಸಂಯುಕ್ತಾಶ್ರಯದಲ್ಲಿ ಜಿ ಕನ್ನಡ ಸರಿಗಮಪ 21 ನೇ ಸೀಝನ್ ವಿಜೇತೆ ಶಿವಾನಿ ಶಿವದಾಸ್ ಸ್ವಾಮಿಯವರಿಗೆ ಅಭಿನಂದನಾ ಸಮಾರಂಭ ಮತ್ತು ಡಾ.ಸಂತೋಷ ಹಾನಗಲ್ಲ ಅವರ ಸಂಪಾದಿತ ಕೃತಿ ಭಾಷೆ- ಬದುಕು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಿವಾನಿ ಶಿವದಾಸ್ ಸ್ವಾಮಿ ಅವರ ಕುಟುಂಬಕ್ಕೆ ಯಾವ ರೀತಿಯ ಕೊರತೆಯಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಇದರಿಂದಾಗಿ ಅವರಿಗೆ ನೀವೇಶನದ ವ್ಯವಸ್ಥೆ ಮಾಡಲಾಗುವುದು. ಹಾಗೆಯೇ ಬೀದರ್ ಜಿಲ್ಲೆಯಲ್ಲಿರುವ ಎಲ್ಲ ಸಂಗೀತ ಕಲಾವಿದರು ಓಣಿ ಓಣಿಗೆ ಹೋಗಿ ವಚನ ಗಾಯನ ಮಾಡಿ, ಜನರಿಗೆ ವಚನ ಸಾರವನ್ನು ಉಣ ಬಡಿಸುವ ಮೂಲಕ ಸಂಗೀತ ಸೇವೆ ಮಾಡಬೇಕು ಎಂದು ಸಲಹೆ ನೀಡಿದರು.
ಕರ್ನಾಟಕ ಜನಪದ ಅಕಾಡೆಮಿಯ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಅವರು ಮಾತನಾಡಿದರು.
ಕಲ್ಯಾಣರಾವ್ ಜಿ. ಪಾಟೀಲ್ ಅವರು ಕೃತಿ ಪರಿಚಯ ಮಾಡಿದರು. ಡಾ.ಸಂತೋಷ ಹಾನಗಲ್ಲ ಅವರ ಭಾಷೆ ಮತ್ತು ಬದುಕು ಪುಸ್ತಕದ ಬಗ್ಗೆ ಮಾತನಾಡಿ, ವಿದ್ಯಾರ್ಥಿಗಳು ಯಾವ ಭಾಷೆ ಕಲಿಯುವ ಅವಶ್ಯಕತೆ ಇದೆ. ಎಂಬುದನ್ನು ತಿಳಿದುಕೊಳ್ಳಲು ಈ ಪುಸ್ತಕ ತುಂಬಾ ಸಹಕಾರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಗುರು ಬಸವ ಪಟ್ಟದ್ದೇವರು, ಡಾ.ಶಿವಾನಂದ್ ಮಹಾಸ್ವಾಮಿ, ಪೌರಾಡಳಿತ ಸಚಿವ ರಹೀಮ್ ಖಾನ್, ರಜನೀಶ್ ವಾಲಿ, ಬಸವರಾಜ್ ಧನ್ನೂರ್, ಸಿದ್ರಾಮ್ ಸಿಂಧೆ, ಶಿವಯ್ಯ ಸ್ವಾಮಿ, ರಾಜೇಂದ್ರ ಸಿಂಗ್ ಪವಾರ್, ಬಸವರಾಜ್ ಜಾಬಶೆಟ್ಟಿ, ಸುರೇಶ್ ಚೆನ್ನಶೆಟ್ಟಿ, ವಿಜಯಕುಮಾರ್ ಸೋನಾರೆ ಹಾಗೂ ಶಿವಕುಮಾರ ಕಟ್ಟೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.