ಬೀದರ್ | ಬೆಂಬಲ ಬೆಲೆ ಯೋಜನೆಯಡಿ ಹೆಸರು, ಉದ್ದು, ಸೋಯಾಬಿನ್ ಖರೀದಿ ಕೇಂದ್ರ ಆರಂಭಿಸಲು ಕಿಸಾನ್ ಸಂಘ ಮನವಿ
ಬೀದರ್: ಜಿಲ್ಲೆಯ ರೈತರ ಹಿತದೃಷ್ಟಿಯಿಂದ ಹೆಸರು, ಉದ್ದು ಹಾಗೂ ಸೋಯಾಬಿನ್ ಬೆಳೆಗಳಿಗೆ ಸರ್ಕಾರವು ತಕ್ಷಣವೇ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಬೇಕು ಎಂದು ಭಾರತೀಯ ಕಿಸಾನ್ ಸಂಘ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.
ಈ ಕುರಿತು ಸಂಘದ ಪ್ರತಿನಿಧಿಗಳು ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಆ.21ರಂದು ಕೂಡ ಖರೀದಿ ಕೇಂದ್ರ ಪ್ರಾರಂಭಿಸುವಂತೆ ಮನವಿ ಮಾಡಲಾಗಿತ್ತು. ಆದರೆ, ಇಂದಿಗೂ ಕೇಂದ್ರಗಳನ್ನು ಆರಂಭಿಸದಿರುವ ಕಾರಣ ರೈತರು ತಮ್ಮ ಬೆಳೆಗಳನ್ನು ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡಬೇಕಾಗುತ್ತಿದೆ. ಇದರಿಂದಾಗಿ ರೈತರು ಭಾರೀ ನಷ್ಟ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಸರ್ಕಾರದ ಎಂ.ಎಸ್.ಪಿ ಯೋಜನೆ ಜಾರಿಯಲ್ಲಿದ್ದರೂ, ಅದರ ಪ್ರಯೋಜನ ಜಿಲ್ಲೆ ರೈತರಿಗೆ ಸಿಗುತ್ತಿಲ್ಲ. ರೈತರು ಸರ್ಕಾರದ ವಿರುದ್ಧ ರೊಚ್ಚಿಗೆದ್ದ ಮುನ್ನವೇ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.
ಮನವಿ ಸಲ್ಲಿಕೆಯ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಪ್ರಭಾ ಮೂಲಗೆ, ಪ್ರಧಾನ ಕಾರ್ಯದರ್ಶಿ ಸೋಮನಾಥ್ ಬಿರಾದಾರ್, ಕಾರ್ಯಾಧ್ಯಕ್ಷ ನಾಗಶೆಟ್ಟಿಪ್ಪಾ ಲಂಜವಾಡೆ, ರೈತ ಮುಖಂಡರಾದ ಶರಣಪ್ಪಾ ಪಾಟೀಲ್, ಕಾಶೀನಾಥ್ ಭೂರೆ, ಧನರಾಜ್ ಲಕ್ಕಾ ಹಾಗೂ ಶಿವಕುಮಾರ್ ಗುಪ್ತಾ ಉಪಸ್ಥಿತರಿದ್ದರು.