ಬೀದರ್ | ಯುವಜನರು ನಶಾಮುಕ್ತ ಸಮಾಜ ನಿರ್ಮಾಣಕ್ಕೆ ಸಂಕಲ್ಪ ಮಾಡಬೇಕು : ಶೈನಿ ಗುಂಟಿ
ಔರಾದ್ : ವ್ಯಸನದಿಂದ ವ್ಯಕ್ತಿಯ ಬದುಕಿನ ಜೊತೆಗೆ ಇಡೀ ಕುಟುಂಬದ ನೆಮ್ಮದಿ ಹಾಳಾಗುತ್ತದೆ. ಹಾಗೆಯೇ ಭವಿಷ್ಯವನ್ನೇ ನಾಶಪಡಿಸುತ್ತದೆ. ಯುವಜನರು ವ್ಯಸನದ ಅಪಾಯ ಅರಿತು ಅದರಿಂದ ದೂರವಿದ್ದು, ನಶಾಮುಕ್ತ ಸಮಾಜ ನಿರ್ಮಾಣಕ್ಕೆ ಸಂಕಲ್ಪ ಮಾಡಬೇಕು ಎಂದು ಅಕ್ಕಪಡೆಯ ರಾಜ್ಯ ಸಂಯೋಜಕಿ ಶೈನಿ ಗುಂಟಿ ಅವರು ಆಗ್ರಹಿಸಿದರು.
ಪಟ್ಟಣದ ಅಮರೇಶ್ವರ್ ಕಾಲೇಜಿನಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ 10 ಕೋಟಿ ನಶಾಮುಕ್ತಿ ಪ್ರತಿಜ್ಞೆ ಮಹಾ ಅಭಿಯಾನದ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿ ಜೀವನವು ಭವಿಷ್ಯ ರೂಪಿಸಿಕೊಳ್ಳುವ ಅಮೂಲ್ಯ ಸಮಯವಾಗಿದೆ. ಈ ಹಂತದಲ್ಲಿ ವ್ಯಸನಕ್ಕೆ ಬಲಿಯಾದರೆ ಶಿಕ್ಷಣ, ಆರೋಗ್ಯ, ಸಂಬಂಧಗಳು ಹಾಗೂ ಜೀವನದ ಗುರಿ ಕೈತಪ್ಪುವ ಸಾಧ್ಯತೆ ಇದೆ. ಹೀಗಾಗಿ ವಿದ್ಯಾರ್ಥಿಗಳು ಯಾವುದೇ ರೀತಿಯ ವ್ಯಸನಕ್ಕೆ ಅವಕಾಶ ನೀಡದೆ, ಸ್ಪಷ್ಟ ಗುರಿಯೊಂದಿಗೆ ನಿರಂತರ ಪರಿಶ್ರಮಿಸಬೇಕು ಎಂದರು.
ವ್ಯಸನದಿಂದ ದೂರವಿರುವುದು ಕೇವಲ ವೈಯಕ್ತಿಕ ನಿರ್ಧಾರವಲ್ಲ; ಅದು ಕುಟುಂಬದ ಭವಿಷ್ಯವನ್ನು ಉಳಿಸುವ ಸಂಕಲ್ಪವಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ನಶಾಮುಕ್ತ ಜೀವನದ ಸಂದೇಶವನ್ನು ತನ್ನ ಸ್ನೇಹಿತರು, ಕುಟುಂಬ ಹಾಗೂ ಸಮಾಜಕ್ಕೆ ತಲುಪಿಸುವ ಮೂಲಕ ಅಭಿಯಾನದ ಉದ್ದೇಶ ಸಾರ್ಥಕಗೊಳಿಸಬೇಕು ಎಂದು ಅವರು ಸಲಹೆ ನೀಡಿದರು.
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಬಿ.ಕೆ. ಸುಹಾಸಿನಿ ಅವರು ಮಾತನಾಡಿ, ನಶಾಮುಕ್ತ ಸಮಾಜ ನಿರ್ಮಾಣದಲ್ಲಿ ಯುವಜನತೆಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಯುವಕರು ತಮ್ಮ ಶಕ್ತಿ ಮತ್ತು ಸಮಯವನ್ನು ಶಿಕ್ಷಣ, ಕೌಶಲ್ಯಾಭಿವೃದ್ಧಿ ಹಾಗೂ ಸಮಾಜಮುಖಿ ಚಟುವಟಿಕೆಗಳಿಗೆ ಬಳಸಿಕೊಂಡರೆ ದೇಶದ ಭವಿಷ್ಯ ಮತ್ತಷ್ಟು ಬಲಿಷ್ಠವಾಗಲಿದೆ ಎಂದು ನುಡಿದರು.
ತಹಸೀಲ್ದಾರ್ ಮಹೇಶ ಪಾಟೀಲ್ ಅವರು ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ, ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು. ಮಾದಕ ವಸ್ತುಗಳ ಸೇವನೆಯಿಂದ ವ್ಯಕ್ತಿಯ ಆರೋಗ್ಯದ ಜೊತೆಗೆ ಕುಟುಂಬದ ನೆಮ್ಮದಿ ಹಾಗೂ ಸಮಾಜದ ಸ್ವಾಸ್ಥ್ಯವೂ ಹಾಳಾಗುತ್ತದೆ. ಯುವಜನರು ದುಶ್ಚಟಗಳಿಂದ ದೂರವಿದ್ದು ಉತ್ತಮ ಜೀವನಶೈಲಿ ರೂಢಿಸಿಕೊಳ್ಳಬೇಕು. ವ್ಯಸನ ಮುಕ್ತಿಯ ಕುರಿತು ನಿರಂತರ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.
ಈ ಸಂದರ್ಭದಲ್ಲಿ ತಾಪಂ ಇಒ ಕಿರಣ್ ಪಾಟೀಲ್, ಬಿಕೆ ಶಾಂತಾ, ಸಿಪಿಐ ರಘುವೀರಸಿಂಗ್ ಠಾಕೂರ್, ಪ್ರಕಾಶ್ ರಾಠೋಡ್, ಪಿಎಸ್ಐ ವಾಸೀಮ್ ಪಟೇಲ್, ಬಂಡೆಪ್ಪ ಕಂಟೆ, ರವಿಂದ್ರ ಮೀಸೆ, ಪತ್ರಕರ್ತ ಸಂಘದ ತಾಲೂಕಾಧ್ಯಕ್ಷ ಶಿವಾನಂದ್ ಮೊಕ್ತೆದಾರ್, ಅಕ್ಕಪಡೆಯ ಸಂಗೀತಾ, ರೇವಣ್ಣಯ್ಯ ಮಠ, ಅಶೋಕ್ ಶೆಂಬೆಳ್ಳಿ, ಅಂಬಾದಾಸ್ ನಳಗೆ, ಓಂಪ್ರಕಾಶ್ ದಡ್ಡೆ ಹಾಗೂ ಸಂಗಪ್ಪ ಘಾಟೆ ಇದ್ದರು.