ಡಿ. ದೇವರಾಜ್ ಅರಸು ಸಾಮಾಜಿಕ ಬದಲಾವಣೆಯ ಹರಿಕಾರ : ಎಸ್‌ಪಿ ಪ್ರದೀಪ್ ಗುಂಟಿ
ಬೀದರ್ : ಡಿ. ದೇವರಾಜ್ ಅರಸು ಅವರು ರಾಜ್ಯ ಕಂಡ ಅಪರೂಪದ ಮುತ್ಸದ್ದಿ ನಾಯಕ. ಉಳುವವನೇ ಭೂಮಿಯ ಒಡೆಯ ಕಾಯ್ದೆ ಹಾಗೂ ಹಿಂದುಳಿದ ವರ್ಗಗಳಿಗೆ ಶೈಕ್ಷಣಿಕ ಮತ್ತು ರಾಜಕೀಯ ಮೀಸಲಾತಿ ಜಾರಿಗೆ ತರುವ ಮೂಲಕ ಅವರು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಒದಗಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರು ಬಣ್ಣಿಸಿದರು.
ನಗರದ ಪೂಜ್ಯ ಡಾ. ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಗುರುವಾರ ಆಯೋಜಿಸಲಾಗಿದ್ದ ಡಿ. ದೇವರಾಜು ಅರಸು ಅವರ 111ನೇ ಜನ್ಮ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಅರಸು ಅವರ ಕ್ರಾಂತಿಕಾರಿ ನಿರ್ಧಾರಗಳು ಹಾಗೂ ಧೀಮಂತ ವ್ಯಕ್ತಿತ್ವವನ್ನು ಇಂದಿನ ಯುವ ಪೀಳಿಗೆ ಮೈಗೂಡಿಸಿಕೊಳ್ಳಬೇಕಿದೆ ಎಂದು ಕರೆ ನೀಡಿದ ಅವರು, ದೇವರಾಜ್ ಅರಸು ಅವರು ಕೇವಲ ಅಧಿಕಾರ ನಡೆಸಿದ ನಾಯಕರಲ್ಲ, ಬದಲಿಗೆ ಸಾಮಾಜಿಕ ಬದಲಾವಣೆಯ ಹರಿಕಾರರಾಗಿದ್ದರು. ಅವರು ಜಾರಿಗೆ ತಂದ ಶೋಷಿತ ಹಾಗೂ ವಂಚಿತ ಸಮುದಾಯಗಳ ಸಬಲೀಕರಣ ಯೋಜನೆಗಳು ಇಂದು ಇಡೀ ದೇಶಕ್ಕೇ ಮಾದರಿಯಾಗಿವೆ. ಅವರಲ್ಲಿದ್ದ ದೂರದೃಷ್ಟಿ, ಬದ್ಧತೆ ಮತ್ತು ದಿಟ್ಟ ನಿರ್ಧಾರ ತಳೆಯುವ ಸಾಮರ್ಥ್ಯವು ಪ್ರತಿಯೊಬ್ಬ ಸಾರ್ವಜನಿಕ ಸೇವಕರಿಗೂ ಪ್ರೇರಣೆಯಾಗಿದೆ ಎಂದರು.
ದೇವರಾಜ್ ಅರಸು ಅವರ ಹಾದಿಯಲ್ಲಿ ಸಾಗುವುದು ಮತ್ತು ಅವರು ತೋರಿದ ಸಾಮಾಜಿಕ ಸಮಾನತೆಯ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವವಾಗಿದೆ. ಯುವಕರು ಇಂತಹ ಮಹಾನ್ ನಾಯಕರ ಆದರ್ಶಗಳನ್ನು ಓದಿ ತಿಳಿದುಕೊಳ್ಳುವುದರ ಜೊತೆಗೆ, ಸಮಾಜ ಕಲ್ಯಾಣಕ್ಕಾಗಿ ಶ್ರಮಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಅವರು ಪ್ರೇರೇಪಿಸಿದರು.
ಮಹಾನಗರ ಪಾಲಿಕೆಯ ಆಯುಕ್ತ ಮುಕುಲ್ ಜೈನ್ ಅವರು ಮಾತನಾಡಿ, ಸಾಮಾಜಿಕ ನ್ಯಾಯದ ಹರಿಕಾರರಾದ ದೇವರಾಜ್ ಅರಸು ಅವರ ಚಿಂತನೆಗಳು ಮತ್ತು ದೂರದೃಷ್ಟಿಯ ಆಡಳಿತ ವೈಖರಿ ಸದಾ ಸ್ಮರಣೀಯವಾಗಿದೆ ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಸುರೇಖಾ ಅವರು ಮಾತನಾಡಿ, ಅರಸು ಅವರು ಜಾರಿಗೆ ತಂದ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಸುಧಾರಣೆಗಳು ಪ್ರತಿಯೊಂದು ಶೋಷಿತ ವರ್ಗವನ್ನು ತಲುಪಿ, ಸಮಾಜದ ಸಬಲೀಕರಣಕ್ಕೆ ಬಲವಾದ ತಡಿಪಾಯ ಹಾಕಿಕೊಟ್ಟವು. ಕಾನೂನುಗಳನ್ನು ರೂಪಿಸುವುದಷ್ಟೇ ಅಲ್ಲದೆ, ಅವುಗಳನ್ನು ತಳಮಟ್ಟದ ಜನರಿಗೆ ತಲುಪಿಸುವಲ್ಲಿ ಅವರು ತೋರಿದ ಧೈರ್ಯ ಹಾಗೂ ಬದ್ಧತೆ ಅಭೂತಪೂರ್ವವಾದದ್ದು. ಅವರ ಆದರ್ಶಗಳನ್ನು ಅಧಿಕಾರ ವ್ಯವಸ್ಥೆ ಹಾಗೂ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಪ್ರತಿಪಾದಿಸಿದರು.
ಈ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಸೇರಿದಂತೆ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.