ಡಿ. ದೇವರಾಜ್ ಅರಸು ಅವರು ದುರ್ಬಲ ವರ್ಗಗಳ ಸಬಲೀಕರಣಕ್ಕಾಗಿ ಮಹತ್ವದ ಕೊಡುಗೆ ನೀಡಿದ್ದಾರೆ : ಅಮೃತರಾವ್ ಚಿಮಕೋಡೆ
ಬೀದರ್ : ಡಿ.ದೇವರಾಜ ಅರಸ್ ಅವರು ಸಾಮಾಜಿಕ ನ್ಯಾಯ, ಸಮಾನತೆ ಹಾಗೂ ಹಿಂದುಳಿದವರು, ದಲಿತರು ಮತ್ತು ದುರ್ಬಲ ವರ್ಗಗಳ ಸಬಲೀಕರಣಕ್ಕಾಗಿ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಬೊಮಗೊಂಡೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಗೂ ಬೀದರ್ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ಅಮೃತರಾವ್ ಚಿಮಕೋಡೆ ಅವರು ಹೇಳಿದರು.
ನಗರದ ಮಹಾತ್ಮಾ ಬೊಮಗೊಂಡೇಶ್ವರ ಶಿಕ್ಷಣ ಸಂಸ್ಥೆಯ ಡಿ. ದೇವರಾಜ ಅರಸು ಡಿ.ಎಡ್. ಕಾಲೇಜು ಹಾಗೂ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಜಂಟಿ ಸಹಯೋಗದಲ್ಲಿ ಮಾಜಿ ಮುಖ್ಯಮಂತ್ರಿ ದಿ. ಡಿ. ದೇವರಾಜ್ ಅರಸು ಅವರ 111ನೇ ಜನ್ಮದಿನಾಚರಣೆ ಹಾಗೂ ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಅವರ 82ನೇ ಜನ್ಮದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.
ದೇವರಾಜ್ ಅರಸು ಅವರ ಜನಪರ ಆಡಳಿತ ಮತ್ತು ಸಾಮಾಜಿಕ ನ್ಯಾಯದ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಅವರು ಸ್ಮರಿಸಿದರು.
ಭಾರತ ರತ್ನ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ಯುವಶಕ್ತಿ, ವಿಜ್ಞಾನ ಮತ್ತು ತಂತ್ರಜ್ಞಾನ ಆಧಾರಿತ ಆಧುನಿಕ ಭಾರತದ ನಿರ್ಮಾಣಕ್ಕೆ ದೂರದೃಷ್ಟಿಯ ಕೊಡುಗೆ ನೀಡಿದ್ದಾರೆ. ದೇಶದ ಅಭಿವೃದ್ಧಿಯಲ್ಲಿ ಯುವಜನರ ಪಾತ್ರ ಮಹತ್ವದ್ದಾಗಿದೆ ಎಂಬ ಅವರ ಚಿಂತನೆ ಇಂದಿನ ಪೀಳಿಗೆಗೆ ಪ್ರೇರಣೆಯಾಗಿದೆ ಎಂದು ಅವರು ಹೇಳಿದರು.
ಈ ಕಾರ್ಯಕ್ರಮವನ್ನು ಶಸ್ತ್ರಚಿಕಿತ್ಸಕ ಡಾ. ಅಹ್ಮದ್ ಖಾನ್ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಬೀದರ್ ಬ್ಲಡ್ ಬ್ಯಾಂಕ್‌ನ ರಕ್ತನಿಧಿ ಅಧಿಕಾರಿ ಆಕಾಶ್ ಪಾಟೀಲ್, ಮಹಾತ್ಮಾ ಬೊಮಗೊಂಡೇಶ್ವರ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಗೋವರ್ಧನ್ ರಾಠೋಡ್, ಉಪಾಧ್ಯಕ್ಷ ಅವಿನಾಶ್ ಚಿಮಕೋಡೆ, ರಾಜಶೇಖರ್ ಸೇಡಂಕರ್, ವೈಜಿನಾಥ್ ಬಿರಾದಾರ್, ಡಿ. ದೇವರಾಜು ಅರಸು ಡಿ.ಎಡ್. ಕಾಲೇಜಿನ ಪ್ರಾಚಾರ್ಯರು, ಕವಿರತ್ನ ಕಾಳಿದಾಸ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಕುಲಕರ್ಣಿ ಗಿರಿರಾವ್, ಮಾತೋಶ್ರೀ ಅಹಿಲ್ಯಾಬಾಯಿ ಹೋಳ್ಕರ್ ಸಂಸ್ಥೆಯ ಮುಖ್ಯಗುರು ಸೈಯದ್ ಸಲಾವುದ್ದೀನ್, ಬಕ್ಕಪ್ಪ, ವಿಷ್ಣು ಹಾಗೂ ರಾಜಶೇಖರ್ ಚಿಟ್ಟಾ ಸೇರಿದಂತೆ ಹಲವು ಪ್ರಮುಖರು ಭಾಗವಹಿಸಿದ್ದರು.