ಬೀದರ್ | ಅಂಬೇಡ್ಕರ್ ಅವರ ಸಂದೇಶಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು : ರಾಜಶೇಖರ್ ಪಾಟೀಲ್
ಬೀದರ್ : ಅಂಬೇಡ್ಕರ್ ಅವರ ಮೂರ್ತಿ ಅನಾವರಣ ಮಾಡಿದ ತಕ್ಷಣ ಏನೂ ಆಗುವುದಿಲ್ಲ. ಅಂಬೇಡ್ಕರ್ ಅವರ ಸಂದೇಶಗಳು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಬದಲಾವಣೆ ಕಾಣುತ್ತೇವೆ ಎಂದು ಮಾಜಿ ಸಚಿವ ರಾಜಶೇಖರ್ ಪಾಟೀಲ್ ಅವರು ಹೇಳಿದರು.
ಇಂದು ಹುಮನಾಬಾದ್ ತಾಲ್ಲೂಕಿನ ಬೋತಗಿ ಗ್ರಾಮದಲ್ಲಿ ಅಂಬೇಡ್ಕರ್ ಅವರ ಮೂರ್ತಿ ಅನಾವರಣಗೊಳಿಸಿ ಅವರು ಮಾತನಾಡಿದರು.
ಅನೇಕ ಮಹಾಪುರುಷರ ಮೂರ್ತಿ ಅನಾವರಣ ಮಾಡುತ್ತಿರುವುದನ್ನು ಇಂದು ನಾವು ಕಾಣುತ್ತಿದ್ದೇವೆ. ಅಂಬೇಡ್ಕರ್ ಅವರು ಎಲ್ಲರಿಗೂ ಸಮಾನತೆ ಮತ್ತು ಸಾಮಾಜಿಕ ನ್ಯಾಯ ನೀಡುವುದಕ್ಕಾಗಿ ತಮ್ಮ ಜೀವನವನ್ನು ಮೂಡುಪಾಗಿಟ್ಟಿದ್ದರು. ಆದರೆ ಇಂದಿನ ದಿನಗಳಲ್ಲಿ ಇಂಥಹ ಕೆಲಸ ಯಾರು ಕೂಡ ಮಾಡುತ್ತಿಲ್ಲ. ಮುಖ್ಯವಾಗಿ ಯುವಕರು ಅಂಬೇಡ್ಕರ್ ಅವರ ತತ್ವಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಂಬೇಡ್ಕರ್ ಅವರು ಶತಮಾನದಿಂದಲೂ ಭಾರತ ದೇಶದಲ್ಲಿರುವ ಜಾತಿ ವ್ಯವಸ್ಥೆಯನ್ನು ಮೀರಿ ಸಮಾನತೆ ಹಾಗೂ ಸಾಮಾಜಿಕ ನ್ಯಾಯ ಹೊಂದಲು ಹೋರಾಟ ಕೈಗೊಂಡಿದ್ದರು. ಅವರು ಕೈಗೊಂಡ ಹೋರಾಟದ ಹಾದಿಯನ್ನು ಇಂದಿನ ಯುವ ಸಮುದಾಯ ಸ್ಮರಿಸಿಕೊಳ್ಳಬೇಕಾಗಿದೆ ಎಂದರು.
ಅಂಬೇಡ್ಕರ್ ಅವರು ತಮ್ಮ ಜೀವನದುದ್ದಕ್ಕೂ ತಾರತಮ್ಯ, ಜಾತಿ ವ್ಯವಸ್ಥೆ ವಿರುದ್ಧ ನಿರಂತರವಾಗಿ ಹೋರಾಟ ನಡೆಸಿದ್ದಾರೆ. ಪ್ರತಿಯೊಬ್ಬರಿಗೂ ಸಮಾನ ಹಕ್ಕು ಮತ್ತು ಅವಕಾಶ ಸಿಗಬೇಕು ಎಂದು ಅವರು ಅಚಲ ಸಂಕಲ್ಪ ಹೊಂದಿದ್ದರು. ಶಿಕ್ಷಣದಿಂದಲೇ ದೇಶದಲ್ಲಿನ ಸಮಸ್ಯೆ ನಿವಾರಣೆಯಾಗಬೇಕು ಎಂದು ಅವರು ಬಯಸಿದ್ದರು ಎಂದು ತಿಳಿಸಿದರು.
ಡಾ.ಮಲ್ಲಿಕಾರ್ಜುನ್ ಖರ್ಗೆ ಅವರು ನಮ್ಮ ಭಾಗಕ್ಕೆ 371 (ಜೆ) ವಿಧಿಯನ್ನು ನೀಡಿದ್ದಾರೆ. 371 (ಜೆ) ಬಂದ ನಂತರ ನಮ್ಮ ಭಾಗದಲ್ಲಿ ಬಡವರು ಕೂಡ ಒಳ್ಳೆಯ ಹುದ್ದೆಗಳಿಗೆ ಹೋಗುತ್ತಿದ್ದಾರೆ. ಈ ದೇಶಕ್ಕೆ ಅಂಬೇಡ್ಕರ್ ಅವರು ನೀಡಿದ ಸಂವಿಧಾನದ ಪ್ರತಿಫಲವಾಗಿ, ಇಂದು ದೇಶದ ಕೆಳವರ್ಗದ ಬಹುತೇಕ ನಾಯಕರು ರಾಜಕೀಯ ಕ್ಷೇತ್ರದಲ್ಲಿ ಉನ್ನತ ಮಟ್ಟದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ್ ಅರಳಿ, ಅಬ್ದುಲ್ ಮನ್ನಾನ್ ಶೇಠ್, ರಮೇಶ್ ಡಾಕುಳಗಿ, ಮಲ್ಲಿಕಾರ್ಜುನ್ ಪ್ರಭಾ, ನಬಿ ಪಟೇಲ್, ಸುಭಾಷ್ ಆರ್ಯ, ಪ್ರಭುರಾವ್ ತಾಳಮಡಗಿ, ಮಲ್ಲಿಕಾರ್ಜುನ್ ಮಹೇಂದ್ರಕರ್, ಶಿವಶರಣಪ್ಪ ಹುಗ್ಗಿ ಪಾಟೀಲ್, ಡಾ.ಅರುಣ್ ಕುರಣೆ, ಉಮೇಶ್, ಸುರೇಶ್ ಘಾಂಗ್ರೆ, ಚಂದ್ರಕಾಂತ್ ಮೇಲ್ದೊಡ್ಡಿ ಹಾಗೂ ಲಕ್ಷ್ಮೀಪುತ್ರ ಮಾಳಗೆ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.