×
Ad

ಬೀದರ್ | ಪಲ್ಲವಿ ಜಿ. ಅವರ ಮೇಲಿನ ಹಲ್ಲೆ ಖಂಡಿಸಿ ಅಖಿಲ ಕರ್ನಾಟಕ ಕುಳುವ ಮಹಾಸಂಘದಿಂದ ಮನವಿ

Update: 2025-07-11 18:36 IST

ಬೀದರ್ : ಕರ್ನಾಟಕ ಎಸ್.ಸಿ, ಎಸ್.ಟಿ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ. ಅವರ ಮೇಲೆ ಹಲ್ಲೆ ಮಾಡಿರುವುದನ್ನು ಖಂಡಿಸಿ ಅಖಿಲ ಕರ್ನಾಟಕ ಕುಳುವ ಮಹಾಸಂಘದಿಂದ ಮನವಿ ಸಲ್ಲಿಸಲಾಗಿದೆ.

ಇಂದು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಪರಿಶಿಷ್ಟ ಜಾತಿಗಳಲ್ಲಿ ಯಾವುದೇ ಭೇದಭಾವ ತೋರದೆ 51 ಅಲೆಮಾರಿ ಜಾತಿಗಳನ್ನು ಒಗ್ಗಟ್ಟಾಗಿ ಕರೆದೊಯ್ಯಲು ಪಲ್ಲವಿ ಜಿ. ಅವರು ಕಾಲಿಗೆ ಚಕ್ರ ಕಟ್ಟಿಕೊಂಡು ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದಾರೆ. ಅವರ ದಕ್ಷ ಆಡಳಿತ, ಅವಿರತ ಪರಿಶ್ರಮ, ಸೇವೆ, ಏಳಿಗೆ ಮತ್ತು ವ್ಯಾಪಕ ಜನಪ್ರತಿಯತೆ ಸಹಿಸದವರು ಅವರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಬಿಕ್ಷಾಟನೆ ಮಾಡುವ ಬಡ ಅಮಾಯಕ ಅಲೆಮಾರಿಗಳ ಹೆಸರಿನಲ್ಲಿ ಕೇವಲ ಅರ್ಜಿ ತುಂಬಿ, ಅಧಿಕಾರಿಗಳಿಗೆ ಬೇದರಿಕೆ ಹಾಕಿ ಯೋಜನೆಗಳ ಅನುದಾನ ನುಂಗಿರುವ ದಳ್ಳಾಳಿಗಳು ಮತ್ತು ಬಿಜೆಪಿ ಪಕ್ಷದಲ್ಲಿ ಸಕ್ರಿಯರಾಗಿ ಗುರುತಿಸಿಕೊಂಡಿರುವ ಅಲೆಮಾರಿ ಜನಾಂಗಕ್ಕೆ ಸೇರಿರುವ ಕಿಡಿಗೇಡಿಗಳ ಗುಂಪನ್ನು ಎತ್ತಿಕಟ್ಟಿ ಹೆಚ್. ಆಂಜನೇಯ ಅವರು ತನ್ನ ರಾಜಕೀಯ ಅಸ್ತಿತ್ವದ ಉಳಿವಿಗಾಗಿ ಹೋರಾಡುತ್ತಿದ್ದಾರೆ. ಇವರು ತಮ್ಮ ರಾಜಕೀಯ ದುರುದ್ದೇಶಕ್ಕಾಗಿ ಅಲೆಮಾರಿಗಳ 51 ಗುಂಪಿನ ಒಗ್ಗಟ್ಟು ಒಡೆಯಲು ಪ್ರಯತ್ನಿಸುತ್ತಿದ್ದಾರೆ. ಇವರು ಕರೆದ ಸಭೆಯಲ್ಲಿಯೇ ಪಲ್ಲವಿ ಜಿ. ಅವರ ಮೇಲೆ ಹಲ್ಲೆ ಮಾಡಲಾಗಿದೆ ಎಂದು ದೂರಲಾಗಿದೆ.

ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಎಸಗಿರುವ ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ಇಷ್ಟೆಲ್ಲಾ ಅವಾಂತರಕ್ಕೆ ಪ್ರೋತ್ಸಾಹಿಸಿ ಅವಿವೇಕದ ನಡೆ ಅನುಸರಿಸಿದ ಹೆಚ್. ಆಂಜನೇಯ ವಿರುದ್ಧ ಕಾಂಗ್ರೆಸ್ ಪಕ್ಷದ ಹೈಕಮಾಂಡ್, ಕರ್ನಾಟಕ ರಾಜ್ಯ ಪ್ರದೇಶ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ಸ್ಥಾನದಿಂದ ಉಚ್ಚಾಟನೆ ಮಾಡಿ, ಪಕ್ಷದಿಂದ ಶಿಸ್ತು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಸಲಾಗಿದೆ.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ರವಿಂದ್ರ ಭಂಗೆ, ಸಂಜುಕುಮಾರ್ ಕೊರವ, ಸಂತೋಷ ಡಿ.ಕೊರವ, ಜಗನ್ನಾಥ್ ಮಾನೆ, ಶಂಕರ್ ಭಂಗೆ, ರಘುನಾಥ ಡಿ.ಕೆ., ಸಂಜುಕುಮಾರ್ ಜಾಧವ್, ಸಾಯಪ್ಪಾ ಘೋಡಂಪಳ್ಳಿ ಹಾಗೂ ಜಗನ್ನಾಥ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News