×
Ad

ಬೀದರ್ | ಕಲಾವಿದರು ಸಮಾಜದ ನಿಜವಾದ ಶಿಲ್ಪಿಗಳು : ಗೊಲ್ಲಹಳ್ಳಿ ಶಿವಪ್ರಸಾದ್

Update: 2025-09-15 19:25 IST

ಬೀದರ್ : ಜನಪದವೇ ಜನರ ಜೀವನಾಡಿ. ಹಳ್ಳಿಗಾಡಿನ ಸಂಸ್ಕೃತಿ ನಮ್ಮ ನಾಡಿನ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಇಂತಹ ಜನಪದ ಪರಂಪರೆಯನ್ನು ಜೀವಂತವಾಗಿಟ್ಟುಕೊಳ್ಳುವ ಕಲಾವಿದರು ಸಮಾಜದ ನಿಜವಾದ ಶಿಲ್ಪಿಗಳಾಗಿದ್ದಾರೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಅವರು ತಿಳಿಸಿದರು.

ಇಂದು ಬೆಳಿಗ್ಗೆ ನಗರದ ಚೆನ್ನಬಸವ ಪಟ್ಟದೇವರು ಜಿಲ್ಲಾ ರಂಗಮಂದಿರದಲ್ಲಿ ಲಗಾರಿ ಭಾರಿಸುವ ಮೂಲಕ ಕಲ್ಯಾಣ ಕರ್ನಾಟಕ ಕಲಾವಿದರ ಮಾಸಾಶನ ಸಂದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕಲ್ಯಾಣ ಕರ್ನಾಟಕದ ಅನೇಕ ಜಾನಪದ ಕಲಾವಿದರು ತಮ್ಮ ಕಲೆಯನ್ನು ಜೀವಂತವಾಗಿ ಉಳಿಸಿದ್ದಾರೆ. ಅವರ ಶ್ರಮ, ತ್ಯಾಗ ಮತ್ತು ಪ್ರತಿಭೆಗೆ ಸರ್ಕಾರದಿಂದ ಗೌರವ ದೊರಕಬೇಕೆಂಬುದು ನಮ್ಮೆಲ್ಲರ ಆಶಯವಾಗಿದೆ. ಈ ಸಂದರ್ಶನವು ಪಾರದರ್ಶಕವಾಗಿ ನಡೆಯಲಿದೆ ಎಂದರು.

ಕರ್ನಾಟಕ ಜಾನಪದ ಅಕಾಡೆಮಿಯ ನಮ್ರತಾ ಅವರು ಮಾತನಾಡಿ, ಕಲ್ಯಾಣ ಕರ್ನಾಟಕ ಪ್ರದೇಶವು ಶತಮಾನಗಳಿಂದ ಜಾನಪದ ಸಂಸ್ಕೃತಿಯ ಹೆಗ್ಗಳಿಕೆಗೆ ಹೆಸರಾಗಿದೆ. ಇಲ್ಲಿನ ಕಲಾವಿದರು ತಮ್ಮ ಕಲೆ, ಪ್ರತಿಭೆ ಮತ್ತು ಶ್ರಮದ ಮೂಲಕ ಜಾನಪದ ಪರಂಪರೆಯನ್ನು ಜೀವಂತವಾಗಿರಿಸುತ್ತಿದ್ದಾರೆ. ಇಂತಹ ಕಲಾವಿದರಿಗೆ ರಾಜ್ಯ ಸರ್ಕಾರವು ನೀಡುತ್ತಿರುವ ಮಾಸಾಶನ ಒಂದು ಮಹತ್ವದ ಹೆಜ್ಜೆ. ಇದು ಕೇವಲ ಆರ್ಥಿಕ ನೆರವು ಮಾತ್ರವಲ್ಲ, ಅವರ ಕಲೆಗೂ ಸನ್ಮಾನವಾಗಿದೆ ಎಂದು ಅಭಿಪ್ರಾಯಪಟ್ಟರು.

ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ್ ಸೋನಾರೆ ಅವರು ಮಾತನಾಡಿದರು.

ಈ ಸಮಯದಲ್ಲಿ ಕನ್ನಡ ಜಾಗೃತಿ ಸಮಿತಿಗೆ ನೇಮಕಗೊಂಡ ಸುನೀಲ ಭಾವಿಕಟ್ಟಿ ಅವರಿಗೆ ಪುಸ್ತಕ ನೀಡುವ ಮೂಲಕ ಶುಭ ಕೋರಲಾಯಿತು.

ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ್ ಸಿಂಧೆ, ಸಿಬ್ಬಂದಿಗಳಾದ ಕ್ಲೈಮೆಂಟಿನಾ, ಅಭಿ, ಸುಧಾಕರ್ ಹಾಗೂ ಗುರುರಾಜ್ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ 91 ಜನ ಕಲಾವಿದರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News