ಬೀದರ್ | ಬಸವಣ್ಣ ಸಮಾನತೆಯ ಸಿದ್ಧಾಂತ ಸಾರಿದ್ದಾರೆ : ಕುಲಪತಿ ಪ್ರೊ.ಬಿ.ಎಸ್.ಬಿರಾದಾರ್
ಬೀದರ್ : ಬಸವಣ್ಣನವರು ಜಗತ್ತಿಗೆ ಜೀವಪರ ಕಾಳಜಿಯ, ಸಮಾನತೆಯ ಸಿದ್ಧಾಂತವನ್ನು ತಿಳಿಸಿದ ಮಹಾನುಭಾವರಾಗಿದ್ದಾರೆ ಎಂದು ಬೀದರ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಎಸ್.ಬಿರಾದಾರ್ ಅವರು ಹೇಳಿದರು.
ಇಂದು ಬೀದರ್ ವಿಶ್ವವಿದ್ಯಾಲಯದಲ್ಲಿ ಸಾಂಸ್ಕೃತಿಕ ನಾಯಕ ಬಸವಣ್ಣನವರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಸವಣ್ಣನವರ ಕಾಯಕನಿಷ್ಠೆಗೆ, ಪ್ರಭಾವಕ್ಕೆ ಒಳಗಾಗಿ ಅನೇಕ ಮಹಾನುಭಾವರು ದೇಶ ವಿದೇಶದಿಂದ ಕರ್ನಾಟಕದ ಬಸವಕಲ್ಯಾಣಕ್ಕೆ ಬಂದಿದ್ದರು. ಕಲ್ಯಾಣದ ಅನುಭವ ಮಂಟಪ ಜಗತ್ತಿನ ಮೊದಲ ಸಂಸತ್ತು ಎನಿಸಿಕೊಂಡಿತ್ತು. ಅಲ್ಲಿಗೆ ಬಂದಂತಹ ಎಲ್ಲರೂ ಕೂಡ ಸಮಾನರಾಗಿದ್ದರು. ಸಕಲ ಜೀವಗಳಿಗೆ ಲೇಸು ಬಯಸುವ ಬಸವಾದಿ ಶರಣರು ಇಡೀ ಜಗತ್ತಿಗೆ ವಚನ ಸಾಹಿತ್ಯವನ್ನು ಕೊಡುಗೆಯಾಗಿ ನೀಡಿದರು ಎಂದು ತಿಳಿಸಿದರು.
ವಿಶ್ವವಿದ್ಯಾಲಯದ ಆಡಳಿತ ಕುಲಸಚಿವೆ ಸುರೇಖಾ ಅವರು ಮಾತನಾಡಿ, ಬಸವಣ್ಣನವರ ಕೀರ್ತಿ ದಶ ದಿಕ್ಕುಗಳಿಗೂ ಹರಡುವ ಮೂಲಕ ನವ ಸಮಾಜದ ನಿರ್ಮಾಣ, ಶಾಂತಿ, ನೆಮ್ಮದಿಯ ಸಹಬಾಳ್ವೆಯ ಜೀವನಕ್ಕೆ ಕಾರಣವಾಯಿತು. ಜಾತಿ ಭೇದ, ಲಿಂಗ ತಾರತಮ್ಯ, ವರ್ಗ ತಾರತಮ್ಯವಿಲ್ಲದ ಸಮಾಜವನ್ನು ಕಟ್ಟ ಬಯಸಿದ ಶರಣರು ನಡೆದಂತೆ ನುಡಿದರು, ನುಡಿದಂತೆ ನಡೆದರು. ಅವರ ಆದರ್ಶ, ವಿಚಾರಧಾರೆಗಳು ನೂರಾರು ವರ್ಷಗಳು ಕಳೆದರೂ ಇಂದಿಗೂ ಜೀವಂತವಾಗಿವೆ ಎಂದರು.
ಸಾಹಿತಿ ಡಾ.ರಾಮಚಂದ್ರ ಗಣಾಪೂರ್ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಬೀದರ್ ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಡಾ.ರವೀಂದ್ರನಾಥ್ ವಿ.ಗಬಾಡಿ, ಡಾ.ಶಾಂತಕುಮಾರ್ ಚಿದ್ರಿ, ಡಾ.ಶಿವಕುಮಾರ್ ಸಂಗನ್, ಡಾ.ಶ್ರೀಕೃಷ್ಣ ಚಕ್ರವರ್ತಿ, ಡಾ.ಅರುಣಕುಮಾರ್ ಬೇಂದ್ರೆ, ಹಾಗೂ ವಿಶ್ವವಿದ್ಯಾಲಯದ ಅಧ್ಯಾಪಕ, ಅಧ್ಯಾಪಕೇತರ ಸಿಬ್ಬಂದಿ ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.