ಬೀದರ್ ಬೆಟರ್‍ಮೆಂಟ್ ಫೌಂಡೇಷನ್ ವತಿಯಿಂದ ತುರ್ತು ನೆರವಿನ ಸಂಖ್ಯೆಗಳ ಸ್ಟಿಕ್ಕರ್ ಬಿಡುಗಡೆ
ಬೀದರ್ : ಬೀದರ್ ಬೆಟರ್‍ಮೆಂಟ್ ಫೌಂಡೇಷನ್ ಹೊರ ತರಲಾದ ತುರ್ತು ನೆರವಿನ ಸಂಖ್ಯೆಗಳ ಸ್ಟಿಕ್ಕರ್ ಅನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರು ಇಂದು ಬಿಡುಗಡೆ ಮಾಡಿದರು.
ಇಂದು ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿಯವರ ಕಚೇರಿಯಲ್ಲಿ ಸ್ಟಿಕ್ಕರ್ ಬಿಡುಗಡೆಗೊಳಿಸಿ ಮಾತನಾಡಿದ ಅವರು, ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರಿಗೆ ನೆರವಾಗುವ ದಿಸೆಯಲ್ಲಿ ಫೌಂಡೇಷನ್ ವತಿಯಿಂದ ತುರ್ತು ಸಂಖ್ಯೆಗಳ ಸ್ಟಿಕ್ಕರ್ ಹೊರ ತಂದಿರುವುದು ಪ್ರಶಂಸನೀಯವಾಗಿದೆ ಎಂದರು.
ಬೀದರ್ ಬೆಟರ್‍ಮೆಂಟ್ ಫೌಂಡೇಷನ್ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ಅವರು ಮಾತನಾಡಿ, ಫೌಂಡೇಷನ್‍ನಿಂದ ಮನೆ ಮನೆಗಳಲ್ಲಿ ಅಂಟಿಸಲು ತುರ್ತು ನೆರವಿನ ಸಂಖ್ಯೆಗಳ ಒಟ್ಟು 10 ಸಾವಿರ ಸ್ಟಿಕ್ಕರ್ ಗಳನ್ನು ವಿತರಿಸಲಾಗುತ್ತಿದೆ ತಿಳಿಸಿದರು.
ಸ್ಟಿಕ್ಕರ್ ನಲ್ಲಿ ಪೊಲೀಸ್ ಠಾಣೆಗಳು, ಆಸ್ಪತ್ರೆ, ಆಂಬುಲನ್ಸ್, ಮಹಿಳಾ ಸಹಾಯವಾಣಿ, ರಾಷ್ಟ್ರೀಯ ಟೆಲಿ ಮೆಂಟಲ್ ಹೆಲ್ತ್ ಕಾರ್ಯಕ್ರಮ, ಜೆಸ್ಕಾಂ, ಏರ್‍ಪೋರ್ಟ್, ಮಹಾನಗರ ಪಾಲಿಕೆ ಸೇರಿದಂತೆ ಮಹತ್ವದ ದೂರವಾಣಿ ಸಂಖ್ಯೆಗಳನ್ನು ಒಳಗೊಂಡಿದೆ ಎಂದು ಅವರು ಮಾಹಿತಿ ನೀಡಿದರು.
ತುರ್ತು ಸಂಖ್ಯೆಗಳು ಕಳ್ಳತನ, ಅಪಘಾತ, ಅನಾರೋಗ್ಯ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ಸಾರ್ವಜನಿಕರಿಗೆ ಸಹಕಾರಿಯಾಗಲಿವೆ. ಆದ ಕಾರಣ ಸಾರ್ವಜನಿಕರ ಮನೆಯ ಗೋಡೆ, ಬಾಗಿಲು ಮತ್ತಿತರ ಗಮನ ಸೆಳೆಯುವ ಸ್ಥಳಗಳಲ್ಲಿ ಸ್ಟಿಕ್ಕರ್ ಗಳನ್ನು ಅಂಟಿಸಬೇಕು ಎಂದು ಅವರು ಕೋರಿದರು.
ಈ ಸಂದರ್ಭದಲ್ಲಿ ಫೌಂಡೇಷನ್‍ನ ಡಾ.ಮಕ್ಸೂದ್ ಚಂದಾ, ಮುಹಮ್ಮದ್ ರಫಿಕ್ ಅಹಮ್ಮದ್, ಮುಹಮ್ಮದ್ ಹುಸೇನಿ, ಮುಕ್ತಾರ್ ಅಹಮ್ಮದ್, ಹಾಮೇದ್ ಖಾದ್ರಿ, ತಾಹ ಕಲೀಮುಲ್ಲಾ ಇದ್ದರು.