ಬೀದರ್ | ಕಾರು-ಬೈಕ್ ನಡುವೆ ಢಿಕ್ಕಿ : ಸವಾರ ಮೃತ್ಯು
Update: 2026-01-16 19:54 IST
ಬೀದರ್ : ಕಾರು ಮತ್ತು ಬೈಕ್ ನಡುವೆ ಢಿಕ್ಕಿ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಭಾಲ್ಕಿ ತಾಲೂಕಿನ ಖಾನಾಪುರ್ ಗ್ರಾಮದ ಹತ್ತಿರ ಶುಕ್ರವಾರ ನಡೆದಿದೆ.
ಮೃತರನ್ನು ಹೊನ್ನಿಕೇರಿ ಗ್ರಾಮದ ನಿವಾಸಿ ಅತಿಷ್ ಎಂದು ಗುರುತಿಸಲಾಗಿದೆ.
ಅತಿಷ್ ಅವರು ತಮ್ಮ ಪತ್ನಿಯ ತವರೂರಾದ ಸಿದ್ದೇಶ್ವರ ಗ್ರಾಮಕ್ಕೆ ಭೇಟಿ ನೀಡಿ ಮರಳಿ ಬರುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಬೀದರ್ ಕಡೆಯಿಂದ ಭಾಲ್ಕಿ ಕಡೆಗೆ ಸಾಗುತ್ತಿದ್ದ ಕಾರು ಮತ್ತು ಅತಿಷ್ ಚಲಾಯಿಸುತ್ತಿದ್ದ ಬೈಕ್ ನಡುವೆ ಮುಖಾಮುಖಿ ಢಿಕ್ಕಿಯಾಗಿದೆ. ಪರಿಣಾಮವಾಗಿ ಬೈಕ್ ಸವಾರ ಅತಿಷ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಧನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದ್ದು, ಘಟನಾ ಸ್ಥಳಕ್ಕೆ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.