ಬೀದರ್ | ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ : ಐವರ ವಿರುದ್ಧ ಪ್ರಕರಣ ದಾಖಲು
ಬೀದರ್ : ಮೆಹಕರ್ ಪೊಲೀಸ್ ಠಾಣೆಗೆ ಬಂದು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇರೆಗೆ ಐವರ ವಿರುದ್ಧ ಪ್ರಕರಣ ದಾಖಲಾಗಿದೆ
ಹಲಸಿ ತುಗಾಂವ್ ಗ್ರಾಮದ ನಿವಾಸಿ ಮಲ್ಹಾರಿ ಶಿಂಧೆ, ಅಟ್ಟರ್ಗಾ ಗ್ರಾಮದ ನಿವಾಸಿ ನಾಗನಾಥ್ ಸೂರ್ಯವಂಶಿ, ಕಾಳಿದಾಸ್ ಸೂರ್ಯವಂಶಿ, ಅಳವಾಯಿ ಗ್ರಾಮದ ನಿವಾಸಿ ಅಕ್ಷಯ್ ಸೂರ್ಯವಂಶಿ ಹಾಗೂ ಅನಂತ್ ಭೋಸಲೆ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.
ಈ ಐವರು ಸೇರಿದಂತೆ ಇನ್ನಿತರು ಗುಂಪಾಗಿ ಘೋಷಣೆ ಕೂಗುತ್ತಾ ಮೆಹಕರ್ ಪೊಲೀಸ್ ಠಾಣೆಗೆ ನುಗ್ಗಿ, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಅಳವಾಯಿ ಗ್ರಾಮದಲ್ಲಿ ದುಷ್ಕರ್ಮಿಗಳು ನಮ್ಮ ಸಮುದಾಯದ ಧ್ವಜ ಕಿತ್ತು ಹಾಕಿ ಅವಮಾನ ಮಾಡಿದ್ದಾರೆ. ಆದರೆ ನೀವು ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ಹೇಳಿದಾಗ, ಇದಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿ, ಕ್ರಮ ಕೈಗೊಳ್ಳಲಾಗಿದೆ ಎಂದು ಅಲ್ಲಿನ ಎಎಸ್ಐ ಅವರು ತಿಳಿಸಿದ್ದಾರೆ. ಆದರೆ, ಅವರ ಮಾತಿಗೆ ಕಿವಿಗೊಡದೆ ಜೈಕಾರ, ಧಿಕ್ಕಾರ ಕೂಗುತ್ತಾ ಪೊಲೀಸ್ ಠಾಣೆಗೆ ನುಗ್ಗಿ ಮುತ್ತಿಗೆ ಹಾಕುತ್ತೇವೆ ಎಂದು ಹೇಳುತ್ತಾ ಮನಸಿಗೆ ಬಂದಂತೆ ದುರ್ವರ್ತನೆ ತೋರಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ದೂರಲಾಗಿದೆ.
ಅ.2 ರಂದು ಅಳವಾಯಿ ಗ್ರಾಮದ ಯುವಕರು ಹಲಸಿ ತುಗಾಂವ್ ಗ್ರಾಮದ ಯುವಕರ ಮೇಲೆ ನೀಲಿ ಧ್ವಜಕ್ಕೆ ಸಂಬಂಧಿಸಿದಂತೆ ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿದ್ದಾರೆ ಎಂದು ಪ್ರಕರಣ ದಾಖಲಾಗಿತ್ತು.
ಈ ಘಟನೆಗೆ ಸಂಬಂಧಿಸಿದಂತೆ ಮೆಹಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ತಿಳಿದು ಬಂದಿದೆ.