ಬೀದರ್ | ಮಹರ್ಷಿ ವಾಲ್ಮೀಕಿ ಜಯಂತಿ ಅರ್ಥಪೂರ್ಣವಾಗಿ ಆಚರಿಸೋಣ : ಮುಹಮ್ಮದ್ ಶಕೀಲ್
ಬೀದರ್ : ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸೋಣ ಎಂದು ಬೀದರ್ ಸಹಾಯಕ ಆಯುಕ್ತ ಮುಹಮ್ಮದ್ ಶಕೀಲ್ ಅವರು ತಿಳಿಸಿದರು.
ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅ.7 ರಂದು ಬೆಳಿಗ್ಗೆ 10:30 ಕ್ಕೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, 12 ಗಂಟೆಗೆ ರಥ ಮೆರವಣಿಗೆ ನಡೆಸಲಾಗುವುದು. ಮೆರವಣಿಗೆಯು ಮಹಾನಗರ ಪಾಲಿಕೆ ಕಛೇರಿಯಿಂದ ಶಿವಾಜಿ ವೃತ್ತ, ಬಸವೇಶ್ವರ್ ವೃತ್ತ, ಅಂಬೇಡ್ಕರ್ ವೃತ್ತ, ಜನರಲ್ ಕರಿಯಪ್ಪ ವೃತ್ತದಿಂದ ಚನ್ನಬಸವ ಪಟ್ಟದೇವರು ರಂಗಮಂದಿರ ತಲುಪುವುದು. ರಂಗಮಂದಿರದಲ್ಲಿ ಮುಖ್ಯ ಕಾರ್ಯಕ್ರಮ ಜರುಗುವುದು ಎಂದು ಮಾಹಿತಿ ನೀಡಿದರು.
ಮಹಾನಗರ ಪಾಲಿಕೆಯಿಂದ ಕುಡಿಯುವ ನೀರು ಹಾಗೂ ಸ್ವಚ್ಛತೆ ಕೈಗೊಳ್ಳಲಾಗುವುದು. ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ವ್ಯವಸ್ಥೆ ನೀಡಲಾಗುವುದು. ಎಲ್ಲಾ ಶಾಲಾ-ಕಾಲೇಜು, ಸರ್ಕಾರಿ ಮತ್ತು ಅರೆ ಸರ್ಕಾರಿ ಕಚೇರಿಗಳಲ್ಲಿ ಹಾಗೂ ಎಲ್ಲಾ ಗ್ರಾಮ ಪಂಚಾಯತ್ ಗಳಲ್ಲಿ ಜಯಂತಿಯನ್ನು ಕಡ್ಡಾಯವಾಗಿ ಆಚರಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಬಳಿರಾಮ್ ಕುಶಲರಾವ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಚಂದ್ರಕಾಂತ್ ಶಹಾಬಾದಕರ್, ಜಿಲ್ಲಾ ಟೋಕರಿ ಕೊಳಿ ಸಮಾಜದ ಅಧ್ಯಕ್ಷ ಜಗನ್ನಾಥ್ ಜಮಾದಾರ್, ಮುಖಂಡರಾದ ಸುನೀಲ್ ಭಾವಿಕಟ್ಟಿ, ಮಾರುತಿ ಖಾಶಂಪೂರ್, ಮಾರುತಿ ಬೌದ್ಧೆ ಹಾಗೂ ಮಾಳಪ್ಪ ಅಡಸಾರೆ ಸೇರಿದಂತೆ ಸಮಾಜದ ಇತರ ಮುಖಂಡರು ಉಪಸ್ಥಿತರಿದ್ದರು.