Bidar | ವಾರದೊಳಗೆ ಹೊಸ ಕೊಳವೆ ಬಾವಿ ಕೊರೆಸಿ ನೀರಿನ ಸಮಸ್ಯೆ ಬಗೆಹರಿಸಲು ಸಿಇಒ ಸೂಚನೆ
ಬೀರಿ (ಕೆ), ನಿಟ್ಟೂರು ಗ್ರಾಮಗಳಲ್ಲಿ ಸಿಇಒ ಬಿರುಸಿನ ಸಂಚಾರ
ಬೀದರ್: ಭಾಲ್ಕಿ ತಾಲೂಕಿನ ಬೀರಿ (ಕೆ) ಗ್ರಾಮದಲ್ಲಿ ಅಗತ್ಯವಿರುವ ಕಡೆ ವಾರದೊಳಗೆ ಹೊಸ ಕೊಳವೆ ಬಾವಿಗಳನ್ನು ಕೊರೆಸಿ ಗ್ರಾಮದ ನೀರಿನ ಸಮಸ್ಯೆ ಬಗೆಹರಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ್ ವಿಠ್ಠಲರಾವ್ ಅಧಿಕಾರಿಗಳಿಗೆ ಸೂಚಿಸಿದರು.
‘ಬೆಳಗ್ಗೆಯ ನಡೆ–ಹಳ್ಳಿ ಕಡೆ’ ಅಭಿಯಾನದ ಅಂಗವಾಗಿ ಶನಿವಾರ ಭಾಲ್ಕಿ ತಾಲೂಕಿನ ಬಿರಿ (ಕೆ) ಗ್ರಾಮದಲ್ಲಿ ಗ್ರಾಮ ಸಂಚಾರ ಕೈಗೊಂಡ ಅವರು, ಗ್ರಾಮದ ಪ್ರತಿಯೊಂದು ಓಣಿಯಲ್ಲಿ ಸಂಚರಿಸಿ ಕುಡಿಯುವ ನೀರು ಹಾಗೂ ದೈನಂದಿನ ಗೃಹ ಬಳಕೆಗೆ ಅಗತ್ಯವಿರುವ ನೀರಿನ ಸಮಸ್ಯೆಯನ್ನು ಪರಿಶೀಲಿಸಿದರು.
ಬಳಿಕ ಗ್ರಾಮದ ದೇವಸ್ಥಾನದ ಆವರಣದಲ್ಲಿ ಕುಂದುಕೊರತೆ ಸಭೆ ಆಯೋಜಿಸಿ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದರು. ಈ ವೇಳೆ ಮಾತನಾಡಿದ ಅವರು, ತುರ್ತು ಕ್ರಿಯಾ ಯೋಜನೆ ಸಿದ್ಧಪಡಿಸಿ ಹೊಸ ಕೊಳವೆ ಬಾವಿಗಳನ್ನು ಕೊರೆಸಿ ಶಾಶ್ವತವಾಗಿ ನೀರಿನ ಸಮಸ್ಯೆ ಬಗೆಹರಿಸುವವರೆಗೆ ಮೂರು ಟ್ಯಾಂಕರ್‌ಗಳ ಮೂಲಕ ಪ್ರತಿದಿನ ಪ್ರತಿ ಟ್ಯಾಂಕರ್ ಆರು ಟ್ರಿಪ್ ನೀರು ಪೂರೈಕೆ ಮಾಡಬೇಕು. ಸಾರ್ವಜನಿಕರಿಗೆ ನೀರಿನ ಸಂಕಷ್ಟ ಎದುರಾಗದಂತೆ ನೋಡಿಕೊಳ್ಳಬೇಕು ಎಂದು ಸಭೆಯಲ್ಲಿದ್ದ ನೀರು ಸರಬರಾಜು ಇಲಾಖೆಯ ಜೆಇ ಹಾಗೂ ಗ್ರಾಪಂ ಪಿಡಿಒಗೆ ಸೂಚಿಸಿದರು.
ವಿಬಿ–ಜಿ ರಾಮ್ ಜಿ ಯೋಜನೆಯಡಿ ಕೃಷಿಕರು ಹಾಗೂ ಕೂಲಿಕಾರರಿಗೆ ವೈಯಕ್ತಿಕ ಮತ್ತು ಸಮುದಾಯ ಕಾಮಗಾರಿಗಳನ್ನು ನೀಡಬೇಕು. ಗ್ರಾಮದಲ್ಲಿ ಸರ್ಕಾರಿ ಜಮೀನು ಲಭ್ಯವಿದ್ದು, ಗ್ರಾಮ ವನ ನಿರ್ಮಿಸಲು ಯೋಜನೆ ರೂಪಿಸಿಕೊಳ್ಳಬೇಕು ಎಂದು ಪಿಡಿಒಗೆ ನಿರ್ದೇಶಿಸಿದರು. ಮುರಾಳ್ ಹಾಗೂ ಕೇರೂರು ಗ್ರಾಮದ ಪ್ರಮುಖರು ಸಭೆಯಲ್ಲಿ ಉಪಸ್ಥಿತರಿದ್ದರು.
ಬಳಿಕ ನಿಟ್ಟೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಹಾಗೂ ಆರೋಗ್ಯ ಸಿಬ್ಬಂದಿ ಕರ್ತವ್ಯದ ಅವಧಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚಿಸಿದರು.
ಆಸ್ಪತ್ರೆಯಲ್ಲಿ ಅಗತ್ಯ ಲಸಿಕೆಗಳು ಹಾಗೂ ಔಷಧಿಗಳ ಕೊರತೆ ಇರಬಾರದು. ಔಷಧಿಗಳ ದಾಸ್ತಾನು ಮುಗಿದ ತಕ್ಷಣ ಸರ್ಕಾರಿ ನಿಯಮಾವಳಿ ಹಾಗೂ ಪ್ರಕ್ರಿಯೆಯಂತೆ ಖರೀದಿ ಮಾಡಬೇಕು. ಗ್ರಾಮಸ್ಥರು ನೀಡುತ್ತಿರುವ ದೂರುಗಳ ಪ್ರಕಾರ ಔಷಧಿಗಳ ಕೊರತೆಯ ನೆಪವೊಡ್ಡಿ ಹೊರರೋಗಿಗಳನ್ನು ಖಾಸಗಿ ಆಸ್ಪತ್ರೆಗೆ ರೆಫರ್ ಮಾಡುತ್ತಿರುವುದನ್ನು ಸಹಿಸುವುದಿಲ್ಲ. ಕರ್ತವ್ಯದಲ್ಲಿ ನಿಷ್ಕಾಳಜಿ ತೋರುವ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿಯನ್ನು ಯಾವುದೇ ಮುಲಾಜಿಲ್ಲದೆ ಅಮಾನತುಗೊಳಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ನಿಟ್ಟೂರು ಗ್ರಾಮಕ್ಕೆ ಹೊಂದಿಕೊಂಡು ಹರಿಯುವ ಮಾಂಜ್ರಾ ನದಿಗೆ ಗ್ರಾಮದ ಶೌಚದ ನೀರು, ಬಚ್ಚಲು ನೀರು ಹಾಗೂ ಚರಂಡಿ ನೀರು ಸೇರದಂತೆ ಗ್ರಾಮಸ್ಥರು ಎಚ್ಚರ ವಹಿಸಬೇಕು. ನದಿಯ ಸ್ವಚ್ಛತೆ ಹಾಗೂ ಪಾವಿತ್ರ್ಯ ಕಾಪಾಡುವುದು ಗ್ರಾಮ ಪಂಚಾಯಿತಿಯ ಜೊತೆಗೆ ಸಾರ್ವಜನಿಕರ ಜವಾಬ್ದಾರಿಯೂ ಆಗಿದೆ ಎಂದು ಸಲಹೆ ನೀಡಿದರು.
ನಂತರ ನಿಟ್ಟೂರು ಗ್ರಾಮದಲ್ಲಿ ವಿಬಿ–ಜಿ ರಾಮ್ ಜಿ ಯೋಜನೆಯಡಿ ನಡೆಯುತ್ತಿದ್ದ ಸಮುದಾಯ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಭಾಲ್ಕಿ ತಾಪಂ ಇಒ ಬೀರೆಂದ್ರಸಿಂಗ್ ಠಾಕೂರ್, ಸಿಡಿಪಿಒ, ನೀರು ಸರಬರಾಜು ಇಲಾಖೆಯ ಜೆಇ, ತಾಪಂ ಸಹಾಯಕ ನಿರ್ದೇಶಕರು ಬಾಲಾಜಿ ಕೋಟೆ, ಬಿರಿ (ಕೆ) ಗ್ರಾಪಂ ಪಿಡಿಒ ಡಾ.ಗೀತಾ, ತಾಂತ್ರಿಕ ಸಂಯೋಜಕ ಅಮರನಾಥ್ ಪಾಟೀಲ್, ಐಇಸಿ ಸಂಯೋಜಕ ಗಣಪತಿ ಹರಕೂಡೆ, ಟಿಎಇ ಆನಂದ್ ಸಾಗರ್ ಹಾಗೂ ಮುಕೇಶ್ ಪಾಟೀಲ್ ಸೇರಿದಂತೆ ಇತರರು ಇದ್ದರು.