ಹುಮನಾಬಾದ್: ಪಟ್ಟಣದ ಮಾಜಿ ಸಚಿವರ ಗೃಹ ಕಚೇರಿಯಲ್ಲಿ ಶನಿವಾರ ಚಿಟಗುಪ್ಪ ತಾಲ್ಲೂಕಿನ ಮಾಡಗೂಳ್ ಗ್ರಾಮದ ನಿವಾಸಿಗಳು ಕುಡಿಯುವ ನೀರು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮಾಜಿ ಸಚಿವ ರಾಜಶೇಖರ್ ಪಾಟೀಲ್ ಅವರಿಗೆ ಮನವಿ ಸಲ್ಲಿಸಿದರು.

ಮಾಡಗೂಳ್ ಗ್ರಾಮದ ಮನೆಗಳಿಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಬೇಕು, ಚರಂಡಿಗಳನ್ನು ಸ್ವಚ್ಛಗೊಳಿಸಬೇಕು ಹಾಗೂ ಹೈಮಾಸ್ಟ್ ವಿದ್ಯುತ್ ದೀಪ ಅಳವಡಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು.

ಈ ವೇಳೆ ಗ್ರಾಮಸ್ಥ ಸುಧಾಕರ್ ಸಂಗಮ್ ಮಾತನಾಡಿ, ಪೈಪ್‌ಲೈನ್ ಅಳವಡಿಸದ ಪರಿಣಾಮ ಮಾಡಗೂಳ್ ಗ್ರಾಮದ ವಿವಿಧ ಓಣಿಗಳಿಗೆ ಕೆಲ ದಿನಗಳಿಂದ ನೀರು ಪೂರೈಕೆಯಾಗುತ್ತಿಲ್ಲ. ಇದರಿಂದ ದಿನನಿತ್ಯದ ಕೆಲಸಗಳಿಗೆ ನೀರು ಸಂಗ್ರಹಿಸಲು ಮಹಿಳೆಯರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಆದ್ದರಿಂದ ಶೀಘ್ರವಾಗಿ ಪೈಪ್‌ಲೈನ್ ಅಳವಡಿಸಿ ನೀರು ಪೂರೈಸಬೇಕು ಎಂದು ಒತ್ತಾಯಿಸಿದರು.

ಮಾಡಗೂಳ್ ಗ್ರಾಮದ ಬಹುತೇಕ ಚರಂಡಿಗಳಲ್ಲಿ ತ್ಯಾಜ್ಯ ಸಂಗ್ರಹವಾಗಿದ್ದು, ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಇದರಿಂದ ಸ್ಥಳೀಯರು ಆರೋಗ್ಯಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸ್ಥಳೀಯರ ಆರೋಗ್ಯದ ಹಿತದೃಷ್ಟಿಯಿಂದ ಕೂಡಲೇ ಚರಂಡಿಗಳನ್ನು ಸ್ವಚ್ಛಗೊಳಿಸಬೇಕು. ಜತೆಗೆ ಐತಿಹಾಸಿಕ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಹೈಮಾಸ್ಟ್ ವಿದ್ಯುತ್ ದೀಪ ಅಳವಡಿಸಬೇಕು ಎಂದು ತಿಳಿಸಿದರು.

ಈ ವೇಳೆ ಮಾತನಾಡಿದ ಮಾಜಿ ಸಚಿವ ರಾಜಶೇಖರ್ ಪಾಟೀಲ್, ಮಾಡಗೂಳ್ ಗ್ರಾಮದ ಮನೆಗಳಿಗೆ ಪೈಪ್‌ಲೈನ್ ಮೂಲಕ ನೀರು ಪೂರೈಸುವ ಕುರಿತು ಈಗಾಗಲೇ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಶೀಘ್ರದಲ್ಲಿಯೇ ಚರಂಡಿ ಸ್ವಚ್ಛತೆ ಸೇರಿದಂತೆ ಗ್ರಾಮಸ್ಥರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಶಿವಕುಮಾರ್ ಮದರಗಾಂವ್, ವಿಜಯಕುಮಾರ್ ಮದರಗಾಂವ್, ಪ್ರಭು ಕುಲಕರ್ಣಿ, ವೀರಶಟ್ಟಿ ಮದರಗಾಂವ್, ಗುಂಡುರೆಡ್ಡಿ ಶಹಾಬಾದ್, ಅನಿಲ್ ಮದರಗಾಂವ್, ಪ್ರಕಾಶರೆಡ್ಡಿ ಶೇರಿಕಾರ್, ರಾಜಶೇಖರ್ ಮದರಗಾಂವ್, ಹಣಮಂತ್ ಮದರಗಾಂವ್ ಹಾಗೂ ಅಪ್ಪರಾವ್ ಮದರಗಾಂವ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor