ಬೀದರ್ : ಕಂಟ್ರಿ ಪಿಸ್ತೂಲ್ ಮಾರಾಟ ಪ್ರಕರಣದಲ್ಲಿ ಈ ಹಿಂದೆ ಇಬ್ಬರನ್ನು ಬಂಧಿಸಿದ್ದ ಪ್ರಕರಣದಲ್ಲೇ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದು, ಬಂಧಿತರಿಂದ ಸುಮಾರು 4 ಲಕ್ಷ ರೂ. ಮೌಲ್ಯದ ಐದು ಪಿಸ್ತೂಲ್ ಹಾಗೂ 12 ಜೀವಂತ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಂದೇಡ್ ಮೂಲದ ಪ್ರಮುಖ ಆರೋಪಿ ಬಲಬೀರಸಿಂಗ್ ಅಲಿಯಾಸ್ ಶೇರಾ ಜಾಧವ್, ಜಹೀರಾಬಾದ್ ಮೂಲದ ಆನಂದಕುಮಾರ್, ಬೀದರ್ ಜಿಲ್ಲೆಯ ಯರನಳ್ಳಿ ಮೂಲದ ಈಶ್ವರ್ ಹಾಗೂ ಜನವಾಡ ಮೂಲದ ಅಶ್ವಿನ್ ಅವರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

ಜುಲೈ ತಿಂಗಳಲ್ಲಿ ಜ್ಞಾನಸುಧಾ ಶಾಲೆಯ ಸಮೀಪ ರಿಂಗ್‌ರೋಡ್ ಪಕ್ಕದಲ್ಲಿ ಇಬ್ಬರು ವ್ಯಕ್ತಿಗಳು ಕಂಟ್ರಿ ಪಿಸ್ತೂಲ್ ಮಾರಾಟ ಮಾಡುವ ಉದ್ದೇಶದಿಂದ ನಿಂತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಅಮನಜೀತ್ ಸಿಂಗ್ ಹಾಗೂ ವೆಂಕಟೇಶ್ ಅಲಿಯಾಸ್ ವೆಂಕಿ ಎಂಬ ಇಬ್ಬರನ್ನು ಬಂಧಿಸಲಾಗಿತ್ತು. ಅವರಿಂದ ಐದು ನಾಡ ಪಿಸ್ತೂಲ್, 26 ಜೀವಂತ ಮದ್ದುಗುಂಡುಗಳು, 10 ಎಂ.ಟಿ. ಕೇಸ್‌ಗಳು, ಐದು ತಲವಾರುಗಳು ಹಾಗೂ ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನ ಸೇರಿದಂತೆ ಒಟ್ಟು 6.73 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿತ್ತು ಎಂದು ತಿಳಿಸಿದರು.

ಇದೀಗ ಅದೇ ಪ್ರಕರಣದ ಪ್ರಮುಖ ಆರೋಪಿ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿ ಬಲಬೀರಸಿಂಗ್ ಅಲಿಯಾಸ್ ಶೇರಾ ಜಾಧವ್‌ನಿಂದ ಮೂರು ಪಿಸ್ತೂಲ್ ಹಾಗೂ ನಾಲ್ಕು ಜೀವಂತ ಮದ್ದುಗುಂಡುಗಳನ್ನು ಜಪ್ತಿ ಮಾಡಲಾಗಿದೆ. ವಿಚಾರಣೆ ವೇಳೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆನಂದಕುಮಾರ್, ಈಶ್ವರ್ ಹಾಗೂ ಅಶ್ವಿನ್ ಅವರ ಬಗ್ಗೆ ಮಾಹಿತಿ ನೀಡಿದ್ದಾನೆ. ಆ ಮಾಹಿತಿಯ ಆಧಾರದ ಮೇಲೆ ಮೂವರನ್ನೂ ಬಂಧಿಸಲಾಗಿದೆ ಎಂದು ಹೇಳಿದರು.

ಆನಂದಕುಮಾರ್‌ನಿಂದ ಒಂದು ಪಿಸ್ತೂಲ್ ಹಾಗೂ ನಾಲ್ಕು ಜೀವಂತ ಮದ್ದುಗುಂಡುಗಳನ್ನು, ಈಶ್ವರ್ ಮತ್ತು ಅಶ್ವಿನ್ ಅವರಿಂದ ಒಂದು ಪಿಸ್ತೂಲ್ ಹಾಗೂ ನಾಲ್ಕು ಜೀವಂತ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟು 4 ಲಕ್ಷ ರೂ. ಮೌಲ್ಯದ ಐದು ಪಿಸ್ತೂಲ್ ಹಾಗೂ 12 ಜೀವಂತ ಮದ್ದುಗುಂಡುಗಳನ್ನು ಜಪ್ತಿ ಮಾಡಲಾಗಿದ್ದು, ನಾಲ್ವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಎಸ್‌ಪಿ ತಿಳಿಸಿದರು.

ಯುವಕರು ಆಯುಧಗಳನ್ನು ಹಿಡಿದುಕೊಂಡು ರೀಲ್ಸ್‌ನಲ್ಲಿ ಪ್ರದರ್ಶಿಸುವ ಉದ್ದೇಶದಿಂದ ಇಂತಹ ಜಾಲದವರನ್ನು ಸಂಪರ್ಕಿಸಿ ಆಯುಧಗಳನ್ನು ಖರೀದಿಸುತ್ತಿರುವುದು ಪೊಲೀಸ್ ಗಮನಕ್ಕೆ ಬಂದಿದೆ. ಆಯುಧಗಳ ಅಗತ್ಯವಿದ್ದರೆ ಕಾನೂನುಬದ್ಧವಾಗಿ ಪಡೆಯಲು ಅವಕಾಶವಿದೆ. ಯಾರಿಗಾದರೂ ಬೆದರಿಕೆ ಇರುವುದಾಗಿ ತನಿಖೆ ವೇಳೆ ತಿಳಿದುಬಂದರೆ, ಅವರು ಕಾನೂನುಬದ್ಧವಾಗಿ ಆಯುಧ ಪಡೆಯುವ ಅವಕಾಶವಿದೆ. ಆದರೆ ರೀಲ್ಸ್‌ಗಾಗಿ ಆಯುಧಗಳನ್ನು ಖರೀದಿಸುತ್ತಿರುವುದು ಗಮನಕ್ಕೆ ಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಪಿ ಪ್ರದೀಪ್ ಗುಂಟಿ ಎಚ್ಚರಿಸಿದರು.



 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor