Bidar | ಜಿಪಂ ಸಿಇಒ ಕೈಯಲ್ಲಿ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ನಕಲಿ ವೈದ್ಯ
ಬೀದರ್ : ಸಿಇಒ ನಡೆ ಗ್ರಾಮಗಳ ಕಡೆ ಕಾರ್ಯಕ್ರಮದ ಅಂಗವಾಗಿ ಸಿಇಒ ಗಿತ್ತೆ ಮಾಧವ್ ವಿಠಲರಾವ್ ಅವರು ಗ್ರಾಮಗಳಿಗೆ ಭೇಟಿ ನೀಡಿದ ಸಮಯದಲ್ಲಿ ಭಾಲ್ಕಿ ತಾಲೂಕಿನ ಬೀರಿ (ಕೆ) ಗ್ರಾಮದಲ್ಲಿ ಒಡಿಶಾ ಮೂಲದ ವಿಶ್ವಜೀತ್ ಎನ್ನುವ ನಕಲಿ ವೈದ್ಯನೊರ್ವ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ಆತನನ್ನು ಬಂಧಿಸಲಾಗಿದೆ.
ಆಡಳಿತವನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಉದ್ದೇಶದಿಂದ ಸಿಇಒ ಗಿತ್ತೆ ಮಾಧವ್ ವಿಠಲರಾವ್ ಅವರು ಭಾಲ್ಕಿ ತಾಲೂಕಿನ ಬೀರಿ (ಕೆ) ಗ್ರಾಮಕ್ಕೆ ಭೇಟಿ ನೀಡಿದ್ದರು. ಈ ವೇಳೆ ಗ್ರಾಮದಲ್ಲಿನ ಮೂಲಭೂತ ಸೌಕರ್ಯಗಳು, ನೈರ್ಮಲ್ಯ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸುತ್ತಿದ್ದರು. ಆಗ ವ್ಯಕ್ತಿಯೊಬ್ಬ ರೋಗಿಗಳಿಗೆ ಚುಚ್ಚುಮದ್ದು ನೀಡುವುದರ ಜೊತೆಗೆ ಮಾತ್ರೆಗಳನ್ನು ವಿತರಿಸುತ್ತಿರುವುದು ಸಿಇಒ ಅವರ ಗಮನಕ್ಕೆ ಬಂದಿದೆ.
ಆತನ ಹಾವಭಾವ ಹಾಗೂ ಚಿಕಿತ್ಸಾ ವಿಧಾನದ ಬಗ್ಗೆ ಅನುಮಾನಗೊಂಡ ಸಿಇಒ ಅವರು ತಕ್ಷಣ ಆತನ ಬಳಿಗೆ ತೆರಳಿ, ವೈದ್ಯಕೀಯ ಪದವಿಯ ಪ್ರಮಾಣಪತ್ರ ಹಾಗೂ ಚಿಕಿತ್ಸೆಗೆ ಸಂಬಂಧಿಸಿದ ಪರವಾನಗಿ ದಾಖಲೆಗಳನ್ನು ತೋರಿಸುವಂತೆ ವಿಚಾರಿಸಿದ್ದಾರೆ. ಈ ವೇಳೆ ಆತ ತಬ್ಬಿಬ್ಬಾಗಿದ್ದು, ಯಾವುದೇ ಅಧಿಕೃತ ದಾಖಲೆಗಳನ್ನು ಒದಗಿಸಲು ವಿಫಲನಾಗಿದ್ದಾನೆ.
ಪ್ರಾಥಮಿಕ ವಿಚಾರಣೆಯಲ್ಲಿ ಆತ ಯಾವುದೇ ವೈದ್ಯಕೀಯ ಪದವಿ ಪಡೆದಿಲ್ಲ ಎಂಬುದು ತಿಳಿದುಬಂದಿದೆ. ಅಲ್ಲದೆ, ಒಡಿಶಾ ರಾಜ್ಯದಿಂದ ಬಂದಿರುವ ಆತ 2019ರಿಂದ ಬೀರಿ (ಕೆ) ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ನಕಲಿ ವೈದ್ಯನಾಗಿ ಅವೈಜ್ಞಾನಿಕವಾಗಿ ಚಿಕಿತ್ಸೆ ನೀಡುತ್ತಿದ್ದನೆಂದು ತಿಳಿದುಬಂದಿದೆ. ಚಿಕಿತ್ಸೆಗಾಗಿ ರೋಗಿಗಳಿಂದ 50 ರೂ. ಪಡೆಯುತ್ತಿದ್ದನೆಂಬ ಮಾಹಿತಿಯೂ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಆತನನ್ನು ಕೂಡಲೇ ವಶಕ್ಕೆ ಪಡೆಯುವಂತೆ ಸಿಇಒ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮುಂದಿನ ದಿನಗಳಲ್ಲಿ ನಕಲಿ ವೈದ್ಯರ ಜಾಲದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಮುಂದಾಗಿದೆ. ಜಿಲ್ಲೆಯಲ್ಲಿ ನೆಲೆಸಿರುವ ನಕಲಿ ವೈದ್ಯರ ಕುರಿತು ಸೂಕ್ಷ್ಮವಾಗಿ ಪರಿಶೀಲನೆ ನಡೆಸಿ, ಅವರ ಪಟ್ಟಿಯನ್ನು ಸಿದ್ಧಪಡಿಸಿ, ಕಾನೂನಿನ ಚೌಕಟ್ಟಿನಲ್ಲಿ ಕಠಿಣ ಶಿಕ್ಷೆಗೆ ಗುರಿಪಡಿಸಲು ಯೋಜಿಸಲಾಗಿದೆ. ಜಿಲ್ಲೆಯ ಎಲ್ಲ ತಾಲೂಕು ವೈದ್ಯಾಧಿಕಾರಿಗಳಿಗೆ ನಕಲಿ ವೈದ್ಯರ ಮೇಲೆ ನಿಗಾ ಇಡುವಂತೆ ಸೂಚನೆ ನೀಡಲಾಗುವುದು ಎಂದು ಸಿಇಒ ಗಿತ್ತೆ ಮಾಧವ್ ವಿಠಲರಾವ್ ತಿಳಿಸಿದ್ದಾರೆ.