ಬೀದರ್ | ಜಿಲ್ಲೆಯಲ್ಲಿ ನಿರಂತರ ಮಳೆ: ಜನಜೀವನ ಅಸ್ತವ್ಯಸ್ತ, ರೈತರಲ್ಲಿ ಆತಂಕ
ಬೀದರ್: ಕಳೆದ 3-4 ದಿನಗಳಿಂದ ಜಿಲ್ಲೆಯಲ್ಲಿ ನಿರಂತರ ಮಳೆ ಸುರಿಯುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಸ್ವಲ್ಪ ಹೊತ್ತು ಬಿಡುವು ನೀಡಿತ್ತೆನ್ನುವಷ್ಟರಲ್ಲಿ ಕಟ್ಟಲು ಕವಿದ ಮೋಡಗಳೊಂದಿಗೆ ಧಾರಾಕಾರ ಮಳೆ ಸುರಿಯುತ್ತಿದೆ.
ಶನಿವಾರ ಹುಮನಾಬಾದ್, ಬಸವಕಲ್ಯಾಣ, ಚಿಟಗುಪ್ಪ ಪ್ರದೇಶಗಳಲ್ಲಿ ಮಳೆ ಧಾರಾಕಾರವಾಗಿ ಸುರಿಯುತ್ತಿದ್ದರಿಂದ ಚರಂಡಿ ನೀರು ರಸ್ತೆಗಳಿಗೆ ನುಗ್ಗಿ ಸಂಚಾರ ಅಸಾಧ್ಯವಾಯಿತು. ಮನ್ನಾಎಖ್ಖೆಳ್ಳಿಯ ಸೇತುವೆ ಕೆಳಗೆ ನೀರು ತುಂಬಿ ಪ್ರಯಾಣಿಕರು ಭಾರಿ ತೊಂದರೆ ಅನುಭವಿಸುವಂತಾಯಿತು. ಅಲ್ಲಿನ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ರವಿವಾರ ಮತ್ತು ಸೋಮವಾರವೂ ಮಳೆ ಸುರಿಯುತ್ತಲೇ ಇದ್ದು, ಜಿಲ್ಲೆಯ ಜನರು, ವಿಶೇಷವಾಗಿ ರೈತರು ತೀವ್ರ ಕಂಗಾಲಾಗಿದ್ದಾರೆ. ಈಗಾಗಲೇ ಹೆಸರು, ಉದ್ದು, ಸೋಯಾ ಸೇರಿದಂತೆ ಹಲವು ಬೆಳೆಗಳು ಹಾನಿಗೊಳಗಾಗಿದ್ದು, ನಿರಂತರ ಮಳೆಯಿಂದ ಉಳಿದ ಬೆಳೆಗಳೂ ನಾಶವಾಗುವ ಭೀತಿ ಎದುರಾಗಿದೆ.
ನಗರದಲ್ಲಿ ಹಾಗೂ ಹಳ್ಳಿಗಳಲ್ಲಿ ಹಲವೆಡೆ ರಸ್ತೆಗಳು ಕೊಚ್ಚಿಕೊಂಡು ಹೋಗಿ, ದೊಡ್ಡ ದೊಡ್ಡ ಗುಂಡಿಗಳು ಉಂಟಾಗಿವೆ. ಇದರಿಂದ ಪ್ರಯಾಣಿಕರು ರಸ್ತೆಗಳಲ್ಲಿ ಜಾಗ್ರತೆಯಿಂದ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.