ಬೀದರ್ | ಬಸವಕಲ್ಯಾಣದಲ್ಲಿ ಆರೆಸ್ಸೆಸ್ ವಿರುದ್ಧ ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ
ಬೀದರ್ : ದೇಶದಲ್ಲಿ ಕೋಮು ಗಲಭೆ ಸೃಷ್ಟಿಸಿ ಜನರನ್ನು ಧರ್ಮದ ಆಧಾರದ ಮೇಲೆ ವಿಭಜನೆ ಮಾಡುತ್ತಿದೆ ಎಂದು ಆರೋಪಿಸಿ ಆರೆಸ್ಸೆಸ್ ವಿರುದ್ಧ ಬಸವಕಲ್ಯಾಣದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ ನಡೆಯಿತು.
ಪ್ರತಿಭಟನೆ ಬಳಿಕ ಬಸವಕಲ್ಯಾಣ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು. ಮನವಿ ಪತ್ರದಲ್ಲಿ, ಡಾ. ಅಂಬೇಡ್ಕರ್ ಅವರು ಯಾವುದೇ ಕಾರಣಕ್ಕೂ ಆರ್ ಎಸ್ ಎಸ್ ಹಾಗೂ ವಿಶ್ವ ಹಿಂದೂ ಮಹಾಸಭಾದಂತಹ ಸಂಘಟನೆಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬಾರದು ಎಂದು ರಾಜಕೀಯ ಪರಿಶಿಷ್ಟ ಜಾತಿಗಳ ಒಕ್ಕೂಟದ ಪ್ರಣಾಳಿಕೆಯಲ್ಲಿ ಎಚ್ಚರಿಕೆ ನೀಡಿದ್ದರು ಎಂದು ಉಲ್ಲೇಖಿಸಲಾಗಿದೆ.
ಮನುವಾದಿಗಳು ಮನಸ್ಕೃತಿಯನ್ನು ಪೂಜಿಸಿ ಭಾರತದ ಸಂವಿಧಾನವನ್ನು ಅಂದಿನಿಂದಲು ತಿರಸ್ಕಾರದ ಮನೋಭಾವದಿಂದಲೇ ನೋಡುತ್ತಾ ಬಂದಿದ್ದಾರೆ. ಹಿಂದೂ ಮಹಿಳೆಯರಿಗೆ ಪುರುಷರಷ್ಟೆ ಸಮಾನ ಹಕ್ಕು ನೀಡಲು ಬಯಸಿ ಹಿಂದೂ ಕೋಡ್ ಬಿಲ್ ಜಾರಿಗೆ ಅಂಬೇಡ್ಕರ್ ಹೋರಾಡುತ್ತಿದ್ದರೆ ಅದರ ಪ್ರತಿಯನ್ನು ಸುಟ್ಟು ಹಾಕಿ ಆರ್‌ಎಸ್‌ಎಸ್ ವಿಕೃತಿ ಮೆರೆದಿತ್ತು. ಇತ್ತಿಚಿಗೆ ಭಾರತದ ಮುಖ್ಯ ನ್ಯಾಯಾಧೀಶ ಗವಾಯಿ ಅವರ ಮೇಲೆ ಶೂ ಎಸೆಯಲಾಗಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಕರೆ ಮಾಡಿ ಅಶ್ಲೀಲ ಪದ ಬಳಸಿ ಜೀವ ಬೆದರಿಕೆ ಹಾಕಿದವರನ್ನು ಶಿಕ್ಷೆಗೆ ಗುರಿ ಪಡೆಸಬೇಕು. ಆರೆಸ್ಸೆಸ್ ಸರಕಾರದ ನಿಯಮ ಮೀರಿ ಕಾರ್ಯಕ್ರಮ ಮಾಡಿದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಸುಪ್ರೀಂ ಕೋರ್ಟ್ ಮುಖ್ಯನ್ಯಾಯಧೀಶ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆದ ವಕೀಲನನ್ನು ಬಂಧಿಸಿ ಅವರ ವಿರುದ್ಧ ಕ್ರಮವನ್ನು ಕೈಗೊಳ್ಳಬೇಕು ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ.
ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ಭಾರತ ರತ್ನ ಡಾ.ಬಿ.ಆರ್ ಅಂಬೇಡ್ಕರ್ ಹೆಸರು ಇಡಬೇಕೆಂದು ಸುಮಾರು 35 ವರ್ಷಗಳಿಂದ ದಲಿತ ಸಂಘರ್ಷ ಸಮಿತಿ ಹೋರಾಟ ಮಾಡುತ್ತಾ ಬಂದಿದೆ. ಇತ್ತೀಚೆಗೆ ಸರಕಾರ ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಿಗೆ ಮಹಾನ್ ನಾಯಕರ ಹೆಸರು ಇಡಲು ನಿರ್ಧರಿಸಿದ್ದು ಇದು ಸ್ವಾಗತಾರ್ಹವಾಗಿದೆ. ಗುಲ್ಬರ್ಗಾ ವಿಶ್ವವಿದ್ಯಾಲಯಕ್ಕೆ ಭಾರತ ರತ್ನ ಡಾ.ಬಿ.ಆರ್ ಅಂಬೇಡ್ಕರ್ ಅವರ ಹೆಸರು ಇಡಬೇಕು ಎಂದು ಒತ್ತಾಯಿಸಲಾಗಿದೆ.
ಈ ವೇಳೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲೂಕು ಅಧ್ಯಕ್ಷ ಮಹಾದೇವ್ ಎಂ. ಗಾಯಕವಾಡ್, ಮನೋಹರ್ ಮೈಸೆ, ಶೋಭಾ ಸೂರ್ಯವಂಶಿ, ಸಚಿನ್ ಬಸನಾಳೆ ಹಾಗೂ ಇಂದುಮತಿ ಬಸನಾಳೆ ಸೇರಿದಂತೆ ಇತರರು ಉಪಸ್ಥಿತರಿದ್ದರು.