ಬೀದರ್ | ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸಿ : ಅಮೃತರಾವ ಚಿಮಕೋಡೆ
ಬೀದರ್ : ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ಸರಿಯಾದ ರೀತಿಯಲ್ಲಿ ತಲುಪಿಸಿ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಅಮೃತರಾವ್ ಚಿಮಕೋಡೆ ಅವರು ತಿಳಿಸಿದರು.
ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಪಂಚ ಗ್ಯಾರಂಟಿ ಪ್ರಗತಿ ಪರಿಶೀಲನಾ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯ ಒಟ್ಟು ಕುಟುಂಬದ ಮಹಿಳಾ ಮುಖ್ಯಸ್ಥೆಯ ಹೆಸರಿನಲ್ಲಿರುವ ಪಡಿತರ ಚೀಟಿಗಳ ಸಂಖ್ಯೆ 3,81,970 ಇವೆ. ಇವರಲ್ಲಿ ಗೃಹಲಕ್ಷ್ಮೀ ಯೋಜನೆಯಡಿಯಲ್ಲಿ ಎಪ್ರಿಲ್ ಅಂತ್ಯಕ್ಕೆ 3,52,294 ಫಲಾನುಭವಿಗಳು ನೊಂದಾಣಿಯಾಗಿರುತ್ತಾರೆ. ಶೇಕಡಾವಾರು ನೊಂದಣಿ 92.23 ಇರುತ್ತದೆ. ಉಳಿದ 29,676 ಫಲಾನುಭವಿಗಳ ನೊಂದಣಿ ಬಾಕಿ ಇರುತ್ತದೆ ಎಂದು ತಿಳಿಸಿದರು.
ಐಟಿ ಮತ್ತು ಜಿ ಎಸ್ ಟಿ ಒಟ್ಟು 12 ಸಾವಿರ ಹಾಗೂ ರೇಷನ್ ಕಾರ್ಡ್ ತಿದ್ದುಪಡಿಗಳ ಸಂಖ್ಯೆ 7 ರಿಂದ 8 ಸಾವಿರ ಇವೆ. ಗೃಹಲಕ್ಷೀ ಯೋಜನೆಗೆ 1,137.67 ಕೋಟಿ ರೂ. ಹಣ ಡಿಬಿಟಿ ಮೂಲಕ ವರ್ಗಾಯಿಸಲಾಗುತ್ತಿದೆ. ಅನ್ನಭಾಗ್ಯ ಯೋಜನೆ ಅಡಿಯಲ್ಲಿ 13,13,305 ಫಲಾನುಭವಿಗಳು ( 3,57,286 ಪಡಿತರ ಚೀಟಿಗಳು) 333.28 ಕೋಟಿ ರೂ. ಅನುದಾನ ಬಳಕೆಯಾಗಿದೆ. ಜುಲೈ 2023 ರಿಂದ ಜನವರಿ 2025 ರವರಿಗೆ 5 ಕೆಜಿ ಅಕ್ಕಿ ಮತ್ತು ಉಳಿದ 5 ಕೆಜಿ ಅಕ್ಕಿಯ ಮೊತ್ತವನ್ನು ಡಿಬಿಟಿ ಮೂಲಕ ಹಣ ವರ್ಗಾಯಿಸಲಾಗಿತ್ತು. ಜನವರಿ 2025ರ ತಿಂಗಳ ಡಿಬಿಟಿ ಮೂಲಕ ವರ್ಗಾವಣೆ ಬಾಕಿ ಇರುತ್ತದೆ. ಫೆಬ್ರವರಿ 2025 ರಿಂದ ಹಣದ ಬದಲಿಗೆ 10 ಕೆಜಿ ಅಕ್ಕಿ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಯುವನಿಧಿ ಯೋಜನೆಯಡಿಯಲ್ಲಿ ಜಿಲ್ಲೆಯಲ್ಲಿ ಒಟ್ಟು 10,489 ನೊಂದಣಿಯಾಗಿದ್ದು, ಅದರಲ್ಲಿ 7,961 ಪದವಿ ಅಭ್ಯರ್ಥಿ ಮತ್ತು 148 ಡಿಪ್ಲೋಮಾ ಅಭ್ಯರ್ಥಿಗಳ ಫಲಾನುಭವಿಗಳಿಗೆ 15.98 ಕೋಟಿ ರೂ. ಅನುದಾನ ಬಳಕೆಯಾಗಿದೆ. ಜಿಲ್ಲೆಯಲ್ಲಿ ಗೃಹ ಜ್ಯೋತಿ ಯೋಜನೆಯಡಿಯಲ್ಲಿ ಒಟ್ಟು 3,49,588 ಫಲಾನುಭವಿಗಳಿದ್ದು, 327.69 ಕೋಟಿ ರೂ. ಹಣ ಬಳಕೆಯಾಗಿದೆ ಎಂದರು.
ಜಿಲ್ಲೆಯಲ್ಲಿ ಶಕ್ತಿ ಯೋಜನೆ ಅಡಿಯಲ್ಲಿ 2023 ರ ಜೂನ್ 11 ರಿಂದ 2025 ರ ಮೇ 6 ರವರಿಗೆ ಮಹಿಳಾ ಮತ್ತು ಬಾಲಕಿಯರು ಸೇರಿ ಒಟ್ಟು 7.82 ಕೋಟಿ ಫಲಾನುಭವಿಗಳು ಸೌಲಭ್ಯ ಪಡೆದಿದ್ದಾರೆ. ಹಾಗೆಯೇ ವಿಭಾಗದ ವಾಹನದಲ್ಲಿ ಪ್ರತಿ ದಿನ ಸರಾಸರಿ 1.12 ಲಕ್ಷ ಮಹಿಳೆಯರು ಪ್ರಯಾಣಿಸುತ್ತಿದ್ದಾರೆ. ಇದಕ್ಕೆ 222.06 ಕೋಟಿ ರೂ. ಸಂದಾಯವಾಗಿದೆ. ಜಿಲ್ಲೆಯಲ್ಲಿ ಒಟ್ಟು 8,01,86,364 ಫಲಾನುಭವಿಗಳ ಸಂಖ್ಯೆ ಮತ್ತು 2,036.62 ಕೋಟಿ ರೂ. ಹಣ ಬಳಕೆಯಾಗಿದೆ ಎಂದು ತಿಳಿಸಿದರು.
ಪ್ರಾಮಾಣಿಕವಾಗಿ ಜನರಿಗೆ ಪಂಚ ಗ್ಯಾರಂಟಿಗಳು ತಲುಪಿಸುವ ಕೆಲಸ ಹಾಗೂ ಇವುಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಕಾರ್ಯ ಸಂಬಂಧಪಟ್ಟ ಅಧಿಕಾರಿಗಳು ಮಾಡಬೇಕು ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಕಿಶೋರಕುಮಾರ್ ದುಬೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಶ್ರೀಧರ್ ಎಮ್.ಎಚ್, ಜೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರ ರಮೇಶ್ ಪಾಟೀಲ್, ಕೆ.ಕೆ.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಕಾಂತ್ ಪುಲೇಕರ್ ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ವಿ. ಪ್ರಭಾಕರ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಸಮಿತಿಯ ಉಪಾಧ್ಯಕ್ಷ ಮತ್ತು ಸದಸ್ಯರು ಉಪಸ್ಥಿತರಿದ್ದರು.