×
Ad

ಬೀದರ್ | ಮೈಕ್ರೋಫೈನಾನ್ಸ್ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲು ಆಗ್ರಹ

Update: 2025-01-29 21:56 IST

ಬೀದರ್ : ಖಾಸಗಿ ಮೈಕ್ರೋಫೈನಾನ್ಸ್ ಸಂಸ್ಥೆಗಳ ದೌರ್ಜನ್ಯ ತಡೆಯಲು ಹೊಸ ಕಾನೂನು ಜಾರಿಗೆ ತರಬೇಕು. ಮಹಿಳೆಯರು, ವೃದ್ಧರು, ನಿರ್ಗತಿಕರು, ಹಾಗೂ ಶೋಷಿತ ವರ್ಗದವರ ಮೇಲೆ ಬಲವಂತದ ವಸೂಲಿ ನಡೆಸಿದರೆ ತಕ್ಷಣವೇ ಕ್ರಿಮಿನಲ್ ಕೇಸು ದಾಖಲಿಸಬೇಕು ಎಂದು ಕರ್ನಾಟಕ ಹೊಯ್ಸಳ ವೇದಿಕೆ ಆಗ್ರಹ ಮಾಡಿದೆ.

ಇಂದು ಭಾಲ್ಕಿಯ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ರಾಜ್ಯದಲ್ಲಿ ಮೈಕ್ರೋಫೈನಾನ್ಸ್ ಸಂಸ್ಥೆಗಳು ಬಡವರು ಹಾಗೂ ಕೆಳ ಮತ್ತು ಮಧ್ಯಮ ವರ್ಗದ ಜನರಿಗೆ ನೀಡುವ ಸಾಲಗಳ ಮೇಲೆ ದುಬಾರಿ ಬಡ್ಡಿದರ ವಿಧಿಸಿ, ವಸೂಲಾತಿ ವೇಳೆ ಅಮಾನವೀಯ ಕಿರುಕುಳ ನೀಡುತ್ತಿವೆ. ಇದರಿಂದಾಗಿ ಹಲವಾರು ಕುಟುಂಬಗಳಿಗೆ ಆರ್ಥಿಕವಾಗಿ ಹಾನಿಯಾಗಿದ್ದು, ನೂರಾರು ಜನ ಆತ್ಮಹತ್ಯೆ ಮಾಡಿಕೊಳ್ಳುವಂತಹ ಹಂತಕ್ಕೆ ತಲುಪಿದ್ದಾರೆ. ಹತ್ತು ಸಾವಿರಕ್ಕೂ ಹೆಚ್ಚು ಜನರು ಈ ಕಿರುಕುಳವನ್ನು ಸಹಿಸಲಾಗದೆ ಅವರ ಸ್ವಂತ ಊರುಗಳನ್ನು ತೊರೆಯಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಮಹಿಳೆಯರ ಮೇಲೆ ಅಮಾನವೀಯ ನಡವಳಿಕೆ, ಬೆದರಿಕೆ, ಹಾಗೂ ಮಾನಸಿಕ ಒತ್ತಡದಿಂದ ಸಾವು ನೋವುಗಳಂತಹ ಘಟನೆಗಳು ಪ್ರತಿದಿನವೂ ವರದಿಯಾಗುತ್ತಿವೆ. ಈ ದುರ್ಘಟನೆಗಳಿಗೆ ಕಾರಣವಾಗಿರುವ ಖಾಸಗಿ ಸಾಲ ಸಂಸ್ಥೆಗಳ ದೌರ್ಜನ್ಯವನ್ನು ತಡೆಯಲು ತಕ್ಷಣವೇ ಹೊಸ ಕಾನೂನು ಜಾರಿಗೆ ತರಬೇಕು ಎಂದು ಒತ್ತಾಯಿಸಿದ್ದಾರೆ.

ಮೈಕ್ರೋ ಫೈನಾನ್ಸ್ ಸಂಸ್ಥೆಗಳ ನಿಯಂತ್ರಣಕ್ಕಾಗಿ ನೋಂದಾಯಿತ ಸಂಸ್ಥೆಗಳು ಮಾತ್ರ ಸಾಲ ನೀಡಲು ಅನುಮತಿ ನೀಡಬೇಕು. ಸಾಲಗಾರರ ಆರ್ಥಿಕ ಸ್ಥಿತಿಯನ್ನು ಪರಿಗಣಿಸಿ ಮರುಪಾವತಿ ಆಯ್ಕೆಗಳನ್ನು ಅನುಮೋದಿಸಬೇಕು. ಮನೆ ಮನೆಗೆ ಬಂದು ಬೆದರಿಸುವ, ಮಾನ ಹಾನಿ ಮಾಡಿ ವಸೂಲಿ ಮಾಡುವ ಕ್ರಮಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕು.

ಜನರ ಮಾನ, ಪ್ರಾಣ ಹಾನಿಗೆ ಕಾರಣವಾದ ಸಂಸ್ಥೆಗಳ ಪರವಾನಗಿಯನ್ನು ತಕ್ಷಣವೇ ರದ್ದುಪಡಿಸಬೇಕು. ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿದರೆ ಸಂಬಂಧಪಟ್ಟ ಪ್ರತಿನಿಧಿಗಳನ್ನು ತಕ್ಷಣ ಬಂಧಿಸಿ, ಕಠಿಣ ಶಿಕ್ಷೆ ವಿಧಿಸಬೇಕು. ದೌರ್ಜನ್ಯಕ್ಕೊಳಗಾದ ಕುಟುಂಬಗಳಿಗೆ ಸರಕಾರ ಪರಿಹಾರ ಪ್ಯಾಕೇಜ್ ಘೋಷಿಸಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.

ಈ ಸಂದರ್ಭದಲ್ಲಿ ಕರ್ನಾಟಕ ಹೊಯ್ಸಳ ವೇದಿಕೆಯ ಜಿಲ್ಲಾಧ್ಯಕ್ಷ ಸಂತೋಷ್ ನಾಟೇಕರ್, ಸಂಜು ನವದ್ಗಿ, ರಾಜಕುಮಾರ್ ಡಾವರಗಾವೆ, ನಾಗಭೂಷಣ್ ಮಾಮಡಿ, ಕನ್ನಡ ಸೇನೆ ತಾಲೂಕಾಧ್ಯಕ್ಷ ದಯಾನಂದ್ ಬಿ ಸಜ್ಜನ್, ಕುಪೇಂದ್ರ ವಂಕೆ, ಶಿವಕುಮಾರ್ ಸ್ವಾಮಿ, ರಾಜಕುಮಾರ್ ಹುಪ್ಪಳ, ಶಿವಕುಮಾರ್ ಕಾಮಠಾಣೆ, ಸಂಗಮೇಶ್ ಮಾರ್ಗೆ, ಚಂದ್ರಕಾಂತ್ ನೆಳಗಿ ಹಾಗೂ ಆಕಾಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News