ಬೀದರ್ | ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಕಲ್ಯಾಣ ಅಧಿಕಾರಿಯನ್ನು ಕೂಡಲೇ ಅಮಾನತುಗೊಳಿಸಿ : ಸಾಯಿ ಶಿಂಧೆ
ಬೀದರ್ : ಭ್ರಷ್ಟಾಚಾರದಲ್ಲಿ ತೊಡಗಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಕಲ್ಯಾಣ ಅಧಿಕಾರಿ ಸಂಗೀತಾ ಎಸ್.ಬಿರಾದಾರ್ ಅವರನ್ನು ಕೂಡಲೇ ಅಮಾನತುಗೊಳಿಸಬೇಕು ಎಂದು ಕರ್ನಾಟಕ ಪ್ರಜಾಶಕ್ತಿ ಸಮಿತಿಯ ಜಿಲ್ಲಾಧ್ಯಕ್ಷ ಸಾಯಿ ಶಿಂಧೆ ಅವರು ಒತ್ತಾಯಿಸಿದರು.
ಇಂದು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ವಿದ್ಯಾರ್ಥಿನಿಲಯಗಳಿಗೆ ಆಹಾರ ಧಾನ್ಯ ಮತ್ತು ಇತರ ಸಾಮಗ್ರಿಗಳನ್ನು ಸರಬರಾಜು ಮಾಡಲು ಬೆಂಗಳೂರಿನ ಅಗ್ರಿಕಲ್ಚರ್ ಪ್ರೊಡ್ಯೂಸ್ ಕೊ-ಆಪರೇಟಿವ್ ಸೂಸೈಟಿಯ ಮಂಜುನಾಥ್ ಡಿ.ಆರ್. ಎನ್ನುವವರಿಗೆ ಆದೇಶವಾಗಿದೆ. ಆದರೆ ಇವರು ಉಪ ಸರಬರಾಜುದಾರರಾದ ಗಿರೀಶ್ ಎನ್ನುವವರಿಗೆ ಧಾನ್ಯ ಮತ್ತೂ ಇನ್ನಿತರ ಸಾಮಗ್ರಿಗಳು ಸರಬರಾಜು ಮಾಡಲು ಅನುವು ಮಾಡಿಕೊಟ್ಟಿದ್ದಾರೆ. ಇದಕ್ಕೆಲ್ಲ ಜಿಲ್ಲಾ ಕಲ್ಯಾಣ ಅಧಿಕಾರಿ ಸಂಗೀತಾ ಎಸ್.ಬಿರಾದಾರ್ ಅವರ ಕುಮ್ಮಕ್ಕೆ ಕಾರಣ ಎಂದು ಆರೋಪಿಸಿದರು.
ಪ್ರತಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿಗೆ 1,000 ರೂ. ವೆಚ್ಚದಲ್ಲಿ ವರ್ಷಕ್ಕೆ 2 ಜೊತೆ ಸಮವಸ್ತ್ರ ಪೂರೈಕ್ಕೆ ಮಾಡಬೇಕಾಗುತ್ತದೆ. ಆದರೆ 2024-2025ನೇ ಸಾಲಿನಲ್ಲಿ ಜಿಲ್ಲೆಯ ಎಲ್ಲಾ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯ ವಿದ್ಯಾರ್ಥಿಗಳಿಗೆ ಸಮವಸ್ತ್ರ ಪೂರೈಕೆ ಮಾಡದೆ ಬೋಗಸ್ ಬಿಲ್ಲು ಮಾಡಿದ್ದಾರೆ. ಪ್ರತಿ ಮೆಟ್ರಿ ಪೂರ್ವ ಬಾಲಕ ವಿದ್ಯಾರ್ಥಿಗೆ ಕ್ಷೌರಕ್ಕಾಗಿ 2 ತಿಂಗಳಿಗೊಮ್ಮೆ 60 ರೂ. ನಂತೆ ವರ್ಷಕ್ಕೆ 5 ಬಾರಿ ಸರ್ಕಾರ ನೀಡುತ್ತದೆ. ಆದರೆ 2024-2025ನೇ ಸಾಲಿನಲ್ಲಿ ಜಿಲ್ಲೆಯ ಎಲ್ಲಾ ಮೇಟ್ರಿಕ ಪೂರ್ವ ಬಾಲಕ ವಿದ್ಯಾರ್ಥಿಗಳಿಗೆ ಕ್ಷೌರ ಮಾಡದೇ ಬೋಗಸ್ ಬಿಲ್ಲು ಮಾಡಿದ್ದಾರೆ. ಜಿಲ್ಲೆಯ ಕೆಲ ವಸತಿ ನಿಲಯಗಳಲ್ಲಿ ಖಾಯಂ ಅಡುಗೆಯವರಾಗಿ ನೇಮಕವಾಗಿ ಕೆಲಸ ಮಾಡದೇ ಮನೆಯಲ್ಲಿಯೇ ಕುಳಿತುಕೊಂಡು ಮೇಲಧಿಕಾರಿಗಳಿಗೆ ಲಂಚ ನೀಡಿ ವೇತನ ಪಡೆಯುತ್ತಿದ್ದಾರೆ ಎಂದು ದೂರಿದರು.
ವಸತಿ ನಿಲಯಗಳಲ್ಲಿ ಕಳಪೆ ಮಟ್ಟದ ಆಹಾರ ಧಾನ್ಯ ವಿತರಣೆ ಮಾಡಲಾಗುತ್ತಿದೆ. ಕಡಿಮೆ ಮಕ್ಕಳಿದ್ದರೂ ಕೂಡ ಹೆಚ್ಚು ಮಕ್ಕಳ ಸಹಿ ನಕಲು ಮಾಡಿ ಬಿಲ್ಲು ಪಡೆಯಲಾಗುತ್ತಿದೆ. ಹೀಗೆಯೇ ಹಲವಾರು ಸಮಸ್ಯೆಗಳಿದ್ದು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಕಲ್ಯಾಣ ಅಧಿಕಾರಿ ಸಂಗೀತಾ ಎಸ್.ಬಿರಾದಾರ್ ಅವರು ಭೋಗಸ್ ಬಿಲ್ಲುಗಳು ಸೃಷ್ಟಿ ಮಾಡಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವುದಕ್ಕಾಗಿ ಬಳಸಬೇಕಾದ ಹಣ ಲೂಟಿ ಹೊಡೆಯುತ್ತಿದ್ದಾರೆ. ಇದರಿಂದಾಗಿ ತಕ್ಷಣವೇ ಇವರನ್ನು ಅಮಾನತುಗೊಳಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಮಹೇಂದ್ರಕುಮಾರ್ ಹೊಸಮನಿ, ನಗರ ಘಟಕದ ಅಧ್ಯಕ್ಷ ವಿನೋದ್ ಶಿಂಧೆ, ಸಂಗಮೇಶ್ ಭಾವಿದೊಡ್ಡಿ, ಕರ್ನಾಟಕ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ನಿಗ್ರಹ ಸಮಿತಿಯ ಜಿಲ್ಲಾಧ್ಯಕ್ಷ ವಿಶಾಲ್ ದೊಡ್ಡಿ, ಸಂತೋಷ್, ಅನಿಲಕುಮಾರ್ ದೊಡ್ಡಿ ಹಾಗೂ ಬಸವರಾಜ್ ಭಾವಿದೊಡ್ಡಿ ಇದ್ದರು.