ಬೀದರ್ | ವರದಕ್ಷಿಣೆ ಕಿರುಕುಳ ಆರೋಪ : ಪ್ರಕರಣ ದಾಖಲು
ಬೀದರ್, ಸೆ.10 : ಗಂಡನ ಮನೆಯವರು ವರದಕ್ಷಿಣೆ ನೀಡುವಂತೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಮಹಿಳೆಯೊರ್ವರು ದೂರು ನೀಡಿದ್ದು, ಮಂಗಳವಾರ ಪ್ರಕರಣ ದಾಖಲಾಗಿದೆ.
ಹುಲಸೂರ್ ತಾಲ್ಲೂಕಿನ ದೇವನಾಳ್ ಗ್ರಾಮದ ಕವಿತಾ (24) ಎಂಬ ಮಹಿಳೆಯೂ ದೂರು ನೀಡಿದ್ದು, ನನ್ನ ತವರೂರು ಚಿಟಗುಪ್ಪ ತಾಲ್ಲೂಕಿನ ಬೆಳಕೇರಾ ಗ್ರಾಮವಾಗಿದ್ದು, ಮೂರು ವರ್ಷಗಳ ಹಿಂದೆ ದೇವನಾಳ ಗ್ರಾಮದ ತುಕಾರಾಮ್ ಎನ್ನುವವರ ಜೊತೆಗೆ ಮದುವೆಯಾಗಿದೆ. ಮದುವೆಯಾದ ನಂತರ ನನ್ನ ಗಂಡ, ಮಾವ, ಅತ್ತೆ, ನಾಗಿಣಿ ಮತ್ತು ಮೈದುನ ಎಲ್ಲರೂ ಸೇರಿಕೊಂಡು 10 ಲಕ್ಷ ರೂ. ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದಾರೆ. ತವರು ಮನೆಯಿಂದ 10 ಲಕ್ಷ ರೂ. ವರದಕ್ಷಿಣೆ ತರದಿದ್ದರೆ ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ, ಜು.17 ರಂದು ನನಗೆ ಹೊಡೆದಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಈ ದೂರಿಗೆ ಸಂಬಂಧಿಸಿದಂತೆ ತುಕಾರಾಮ್ ಮೇತ್ರೆ, ವೆಂಕಟರಾವ್ ಮೇತ್ರೆ, ಶ್ರೀದೇವಿ ಮೇತ್ರೆ, ಶಿವಕುಮಾರ್ ಮೇತ್ರೆ, ಜ್ಞಾನೇಶ್ವರ್ ಮೇತ್ರೆ ಹಾಗೂ ವೈಷ್ಣವಿ ಮೇತ್ರೆ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಹುಲಸೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.