×
Ad

ಬೀದರ್ | ಸಮೀಕ್ಷೆಯಲ್ಲಿ ಧರ್ಮದ ಕಾಲಂನಲ್ಲಿ ‘ಲಿಂಗಾಯತ’ ಎಂದು ನಮೂದಿಸಿ: ಶ್ರೀಕಾಂತ್ ಸ್ವಾಮಿ

Update: 2025-09-19 19:46 IST

ಬೀದರ್: ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಧರ್ಮದ ಕಾಲಂನಲ್ಲಿ ಹಿಂದೂ ಬದಲು ‘ಲಿಂಗಾಯತ’ ಎಂದು ನಮೂದಿಸಬೇಕು ಎಂದು ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿಯ ರಾಜ್ಯ ಸಂಚಾಲಕ ಶ್ರೀಕಾಂತ್ ಸ್ವಾಮಿ ಕರೆ ನೀಡಿದರು.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿ, ಸಮೀಕ್ಷೆಯ 11ನೇ ಕಾಲಂನಲ್ಲಿ ಇರುವ ‘ಇತರೆ ಧರ್ಮ’ ವಿಭಾಗದಲ್ಲಿ ಲಿಂಗಾಯತ ಎಂದು ಬರೆಯಬೇಕು. ಮೂಲ ಕಸುಬು ಹೊಂದಿರುವ ಲಿಂಗಾಯತರು ಜಾತಿ ಕಾಲಂನಲ್ಲಿ ತಮ್ಮ ಜಾತಿ ಮತ್ತು ಉಪಜಾತಿಯನ್ನು ದಾಖಲಿಸಬೇಕು ಎಂದರು.

1994ರಲ್ಲಿ ಲಿಂಗೈಕ್ಯ ಮಾತೆ ಮಹಾದೇವಿಯವರು ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಒತ್ತಡ ತಂದಿದ್ದರು. 1999-2000ರಲ್ಲಿ ಧರ್ಮದ ಮಾನ್ಯತೆಗೆ ಹೋರಾಟ ನಡೆದಿತ್ತು. 2017ರಲ್ಲಿ ಬೀದರ್‌ನಲ್ಲಿ ಮಾತಾಜಿಯವರ ನೇತೃತ್ವದಲ್ಲಿ ಬೃಹತ್ ಹೋರಾಟ ಜರುಗಿತ್ತು. ಇಂದಿಗೂ ಎರಡು ಕೋಟಿಗೂ ಹೆಚ್ಚು ಲಿಂಗಾಯತರು ರಾಜ್ಯದಲ್ಲಿ ಇದ್ದರೂ, ಕಾಂತರಾಜು ವರದಿಯಲ್ಲಿ ಕೇವಲ 60-75 ಲಕ್ಷ ಜನರೇ ಇದ್ದಂತೆ ತೋರಿಸಲಾಗಿದೆ. ಇದಕ್ಕೆ ಕಾರಣ ಅರಿವಿನ ಕೊರತೆ ಮತ್ತು ಅಸ್ಪಷ್ಟ ಮಾಹಿತಿ ಎಂದು ತಿಳಿಸಿದರು.

ಸಮುದಾಯಕ್ಕೆ ಒಗ್ಗಟ್ಟು ಕಡ್ಡಾಯ ಎಂದು ಹೇಳಿದ ಅವರು, ಯಾರ ಮಾತಿಗೂ ಕಿವಿಗೊಡದೆ 11ನೇ ಕಾಲಂನಲ್ಲಿ ಲಿಂಗಾಯತ ಎಂದು ಮಾತ್ರ ಬರೆಯಬೇಕು. ಇದು ಲಿಂಗಾಯತ ಧರ್ಮದ ಅಸ್ಮಿತೆ ಮತ್ತು ಭವಿಷ್ಯದ ಪೀಳಿಗೆಯ ಉಜ್ವಲತೆಗೆ ಅಗತ್ಯ ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಜಗದ್ಗುರು ಡಾ. ಚನ್ನಬಸವಾನಂದ ಸ್ವಾಮೀಜಿ, ಬಸವ ಮಂಟಪದ ಸದ್ಗುರು ಮಾತೆ ಸತ್ಯಾದೇವಿ, ಪ್ರಮುಖರಾದ ಶಿವರಾಜ್ ಪಾಟೀಲ್ ಅತಿವಾಳ್, ಬಸವಂತರಾವ್ ಬಿರಾದಾರ್, ರವಿಕಾಂತ್ ಬಿರಾದಾರ್, ಮಲ್ಲಿಕಾರ್ಜುನ್ ಬುಕ್ಕಾ, ವಿಶ್ವನಾಥ್ ಪಾಟೀಲ್, ಓಂಪ್ರಕಾಶ್ ರೊಟ್ಟೆ ಹಾಗೂ ಸತೀಶ್ ಪಾಟೀಲ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News