ಬೀದರ್ | ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ಎಲ್ಲರ ಸಹಯೋಗ ಅಗತ್ಯ : ಸಿಇಓ ಡಾ.ಗಿರೀಶ್ ಬದೋಲೆ
ಬೀದರ್ : ರಾಜ್ಯ ಸರ್ಕಾರವು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಹಮ್ಮಿಕೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಅತ್ಯಂತ ಮಹತ್ವಪೂರ್ಣವಾಗಿದ್ದರಿಂದ ಇದಕ್ಕೆ ಎಲ್ಲರ ಸಹಯೋಗ ಅಗತ್ಯ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಡಾ.ಗಿರೀಶ್ ಬದೋಲೆ ಅವರು ತಿಳಿಸಿದರು.
ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2025 ರ ಜಿಲ್ಲಾ ಮಟ್ಟದ ಮಾಸ್ಟರ್ ಟ್ರೇನರ್ ಗಳಿಗೆ ಹಮ್ಮಿಕೊಂಡಿದ್ದ ಒಂದು ದಿನದ ತರಬೇತಿ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಈ ಸಮೀಕ್ಷೆ ಜನರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಅರಿಯಲು ಸಹಕಾರಿಯಾಗಲಿದೆ. ಸರ್ಕಾರದ ಯೋಜನೆಗಳ ಲಾಭ ಎಷ್ಟರ ಮಟ್ಟಿಗೆ ಜನರಿಗೆ ತಲುಪಿದೆ ಹಾಗೂ ಅದರಿಂದ ಅವರ ಜೀವನ ಮಟ್ಟದಲ್ಲಾದ ಬದಲಾವಣೆಯು ನಿಖರವಾಗಿ ತಿಳಿದು ಬರಲಿದೆ. ಈ ಮೂಲಕ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಈ ಸಮೀಕ್ಷೆ ದಿಕ್ಸುಚಿಯಾಗಲಿದೆ ಎಂದರು.
ಅಪರ ಜಿಲ್ಲಾಧಿಕಾರಿ ಶಿವಾನಂದ್ ಕರಾಳೆ ಅವರು ಮಾತನಾಡಿ, ಈಗಾಗಲೇ ಸಮೀಕ್ಷೆಗೆ ಸಂಬಂಧಿಸಿದಂತೆ ಎಲ್ಲಾ ಪೂರ್ವಭಾವಿ ಕ್ರಮ ಕೈಗೊಳ್ಳಲಾಗಿದೆ. ಕುಟುಂಬ ಸಮೀಕ್ಷೆಗಾಗಿ ಜೆಸ್ಕಾಂ ಸಿಬ್ಬಂದಿಗಳ ಸಹಯೋಗದಿಂದ ಮನೆಗಳನ್ನು ಗುರುತಿಸಿ ಸ್ಟಿಕರ್ ಅಂಟಿಸುವ ಕಾರ್ಯ ಮಾಡಲಾಗಿದೆ. ಮೀಟರ್ ಇಲ್ಲದ ಮನೆಗಳನ್ನು ಗುರುತಿಸುವ ಕಾರ್ಯ ಪ್ರಗತಿಯಲ್ಲಿದೆ. ಈ ಸಮೀಕ್ಷೆ ಐತಿಹಾಸಿಕ ಸಮೀಕ್ಷೆಯಾಗಿದ್ದು, ಪೂರ್ಣ ಪ್ರಮಾಣದಲ್ಲಿ ಜನತೆ ಸಹಕರಿಸಿ ಭವ್ಯ ಭವಿಷ್ಯಕೆ ಸಾಕ್ಷಿಯಾಗಬೇಕು ಎಂದು ತಿಳಿಸಿದರು.
ಈ ಕಾರ್ಯಾಗಾರದಲ್ಲಿ ರಾಜ್ಯ ಮಟ್ಟದ ಮಾಸ್ಟರ್ ಟ್ರೇನರ್ ಡಾ.ಗೌತಮ್ ಅರಳಿ, ಚನ್ನಬಸವ ಹೇಡೆ, ತಾನಾಜಿ ನರೋಟೆ, ಮಾರುತಿ ಸಗರ ವಿವಿಧಡೆಯಿಂದ ನಿಯೋಜಿತ ಜಿಲ್ಲಾ ಮಟ್ಟದ ಮಾಸ್ಟರ್ ಟ್ರೇನರ್ ಗಳಿಗೆ ತರಬೇತಿ ನೀಡಿದರು.
ಈ ಸಂದರ್ಭದಲ್ಲಿ ಬೀದರ್ ಸಹಾಯಕ ಆಯುಕ್ತ ಮಹಮ್ಮದ್ ಶಕೀಲ್, ಪತ್ರಾಂಕಿತ ವ್ಯವಸ್ಥಾಪಕ ಕರಬಸಮ್ಮ, ವ್ಯವಸ್ಥಾಪಕ ಅಶೋಕ್ ಶೇರಿಕಾರ್ ಹಾಗೂ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಸುನಿತಾ ಪಟ್ವಾಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.