×
Ad

ಅಲೆಮಾರಿ ಜನಾಂಗಕ್ಕೆ ನಿವೇಶನ ನೀಡುವಂತೆ ಆಗ್ರಹ : ಔರಾದ್‌ನಲ್ಲಿ 10ನೇ ದಿನಕ್ಕೆ ಕಾಲಿಟ್ಟ ಅಹೋರಾತ್ರಿ ಧರಣಿ

Update: 2026-01-28 18:12 IST

ಔರಾದ್: ಪಟ್ಟಣದ ತಹಶೀಲ್ ಕಚೇರಿ ಆವರಣದಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಅಲೆಮಾರಿ ಜನಾಂಗಕ್ಕೆ ನಿವೇಶನ ಕಾಯ್ದಿರಿಸಿ ಮೂಲಭೂತ ಸೌಕರ್ಯ ಒದಗಿಸುವಂತೆ ಆಗ್ರಹಿಸಿ ಜ.19ರಂದು ಆರಂಭಗೊಂಡ ಅಹೋರಾತ್ರಿ ಧರಣಿ ಇಂದು 10ನೇ ದಿನಕ್ಕೆ ಕಾಲಿಟ್ಟಿದೆ.

ಪ್ರತಿಭಟನಾಕಾರರು, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅಲೆಮಾರಿ ಜನಾಂಗದ ಸಮಸ್ಯೆಗಳನ್ನು ಆಲಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ.

ರಸ್ತೆ ಬದಿಯಲ್ಲಿ ಸೀರೆಯಿಂದ ನಿರ್ಮಿಸಿದ ಟೆಂಟ್‌ಗಳು ಹಾಗೂ ಜೋಪಡಿಗಳಲ್ಲಿ ವಾಸಿಸುತ್ತಿರುವ ಅಲೆಮಾರಿ ಜನಾಂಗಕ್ಕೆ ವಸತಿ ಸೇರಿದಂತೆ ಕನಿಷ್ಠ ಮೂಲ ಸೌಕರ್ಯ ಒದಗಿಸುವಲ್ಲಿ ಜಿಲ್ಲಾಡಳಿತ, ತಾಲೂಕಾಡಳಿತ ಹಾಗೂ ಜನಪ್ರತಿನಿಧಿಗಳು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಮಂಜೂರಾಗಿರುವ ನಿವೇಶನಗಳನ್ನು ಹಂಚಿಕೆ ಮಾಡದೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದರಿಂದ ಅಲೆಮಾರಿಗಳ ಬದುಕು ಅತಂತ್ರ ಸ್ಥಿತಿಗೆ ತಲುಪಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ಮಂಜೂರಾದ ನಿವೇಶನಗಳನ್ನು ಹಂಚಿಕೆ ಮಾಡಬೇಕು. ಇಲ್ಲದಿದ್ದರೆ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಪ್ರತಿಭಟನೆಯ ನೇತೃತ್ವ ವಹಿಸಿರುವ ರಾಹುಲ್ ಖಂದಾರೆ ಎಚ್ಚರಿಕೆ ನೀಡಿದ್ದಾರೆ.

ಅಹೋರಾತ್ರಿ ಧರಣಿ ನಡೆಯುತ್ತಿರುವ ಸ್ಥಳಕ್ಕೆ ಮಾಜಿ ಕೇಂದ್ರ ಸಚಿವ ಭಗವಂತ್ ಖೂಬಾ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಕೆ. ಪುಂಡಲಿಕರಾವ್ ಹಾಗೂ ಅರವಿಂದಕುಮಾರ್ ಅರಳಿ ಭೇಟಿ ನೀಡಿ, ಅಲೆಮಾರಿ ಜನಾಂಗದ ಸಮಸ್ಯೆಯನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.

ಕಳೆದ ಹದಿನೈದು ವರ್ಷಗಳಿಂದ ಅಧಿಕಾರಿಗಳು ಅನೇಕ ಬಾರಿ ನಿವೇಶನ ನೀಡುವ ಭರವಸೆ ನೀಡುತ್ತಿದ್ದಾರೆ. ಆದರೆ ಈಗ ಆ ಭರವಸೆಗಳ ಮೇಲೆ ನಂಬಿಕೆ ಇಲ್ಲ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ. ಅಲೆಮಾರಿ ಜನಾಂಗಕ್ಕಾಗಿಯೇ ಪ್ರತ್ಯೇಕವಾಗಿ ಮಂಜೂರಾದ ಸರ್ವೇ ನಂ.183ರಲ್ಲಿನ 2 ಎಕರೆ ಜಾಗವನ್ನು ಹಂಚಿಕೆ ಮಾಡಬೇಕು. ಈ ಹಿಂದೆ ರಾಜಕೀಯ ಒತ್ತಡದಿಂದ ರದ್ದುಗೊಳಿಸಲಾದ ಮಂಜೂರಾತಿಯನ್ನು ಪುನಃ ಜಾರಿಗೊಳಿಸಬೇಕು. ಜಿಲ್ಲಾಡಳಿತಕ್ಕೆ ಸಲ್ಲಿಸಿರುವ ಪ್ರಸ್ತಾವನಾ ವರದಿಯನ್ನು ವಾಪಸ್ ಪಡೆದು, ಹೊಸದಾಗಿ ಹಂಚಿಕೆ ಪ್ರಕ್ರಿಯೆ ಆರಂಭಿಸಬೇಕು ಎನ್ನುವುದು ಅವರ ಪ್ರಮುಖ ಬೇಡಿಕೆಯಾಗಿದೆ.

ಇನ್ನೆರಡು ದಿನಗಳಲ್ಲಿ ಅಲೆಮಾರಿ ಜನಾಂಗದ ಸಂಪೂರ್ಣ ಬೇಡಿಕೆಗಳು ಈಡೇರದಿದ್ದರೆ ಹೋರಾಟವನ್ನು ಬೇರೆ ರೂಪಕ್ಕೆ ಕೊಂಡೊಯ್ಯಲಾಗುತ್ತದೆ. ಜ.30ರಂದು ಔರಾದ್ ತಹಶೀಲ್ದಾರ್ ಕಚೇರಿಯಿಂದ ಬೀದರ್ ಜಿಲ್ಲಾಧಿಕಾರಿ ಕಚೇರಿವರೆಗೆ ಕಾಲ್ನಡಿಗೆ ಜಾಥಾ ನಡೆಸಿ, ಜಿಲ್ಲಾಧಿಕಾರಿ ಕಚೇರಿ ಮುಂದೆ ಅಹೋರಾತ್ರಿ ಧರಣಿ ನಡೆಸಲಾಗುವುದು.

-ಸುಭಾಷ್ ಲಾಧಾ, ಸಂಘಟನೆ ಪ್ರಮುಖ

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News