ಬೀದರ್ | ಉಡಬಾಳ್ ಗ್ರಾಮ ಪಂಚಾಯತ್ ಅಧ್ಯಕ್ಷ, ಸದಸ್ಯರ ಮೇಲೆ ಸುಳ್ಳು ಆರೋಪ : ನರಸಾರಡ್ಡಿ
ಬೀದರ್ : ಉಡಬಾಳ್ ಗ್ರಾಮ ಪಂಚಾಯತ್ ಅಧ್ಯಕ್ಷ ಮತ್ತು ಸದಸ್ಯರ ಮೇಲೆ ಲಕ್ಷ್ಮಣ್ ಹಾಗೂ ಮನೋಹರ್ ಅವರು ಕೂಡಿಕೊಂಡು ಸುಳ್ಳು ಆರೋಪ ಮಾಡುತ್ತಿದ್ದಾರೆ. ಅವರ ಮೇಲೆ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ಉಡಬಾಳ್ ಗ್ರಾಮ ಪಂಚಾಯತ್ ಸದಸ್ಯ ನರಸಾರಡ್ಡಿ ಅವರು ತಿಳಿಸಿದರು.
ಇಂದು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಉಡಬಾಳ್ ಗ್ರಾಮ ಪಂಚಾಯತ್ ನಲ್ಲಿ ಕೆಲವೊಂದು ಕಾಮಗಾರಿಗಾಗಿ ಲಕ್ಷಾಂತರ ರೂ. ಹಣ ಖರ್ಚು ಮಾಡಲಾಗಿದೆ ಎಂದು ದೂರಿದ್ದಾರೆ. ಆದರೆ ಮೇಲಾಧಿಕಾರಿಗಳು ಎಲ್ಲ ಕ್ರಿಯಾಯೋಜನೆಗಳು ಪರಿಶೀಲನೆ ನಡೆಸಿದ್ದು, ಅವರು ದೂರಿರುವ ಯಾವುದೇ ಕಾಮಗಾರಿಗಳು ಗ್ರಾಮ ಪಂಚಾಯತ್ ಕ್ರಿಯಾ ಯೋಜನೆಯಲ್ಲಿ ಇರುವುದಿಲ್ಲ. ಅವರು ಗೊತ್ತು ಗುರಿ ಇಲ್ಲದೇ ಸುಳ್ಳು ಆರೋಪ ಮಾಡಿದ್ದಾರೆ ಎಂದು ಆರೋಪಿಸಿದರು.
ಮನರೇಗಾ ಯೋಜನೆ ಅಡಿಯಲ್ಲಿ ಅಕ್ರಮ ಎಸಗಲಾಗಿದೆ ಎಂದು ಆರೋಪಿಸಲಾಗಿದೆ. ಆದರೆ ಮನರೇಗಾ ಯೋಜನೆ ಅಡಿಯಲ್ಲಿ ಸುಮಾರು 20 ಕೆಲಸ ಮಾಡಲಾಗಿದ್ದು, ಜಿಲ್ಲಾ ಪಂಚಾಯತ್ ಅಧಿಕಾರಿ ಪರಿಶೀಲನೆ ನಡೆಸಿ ಹೋಗಿದ್ದಾರೆ. ಇದರಲ್ಲಿ ಯಾವುದೇ ಅಕ್ರಮ ಎಸಗಿಲ್ಲ. ಹಾಗೆಯೇ ಶುದ್ಧ ಕುಡಿಯುವ ನೀರಿನ ಘಟಕ ಲ್ಯಾಂಡ್ ಆರ್ಮಿ ಇಲಾಖೆಯವರು ಪಂಚಾಯತ್ ಗೆ ಹಸ್ತಾಂತರ ಮಾಡಲಿಲ್ಲ. ಈ ಕಾಮಗಾರಿ ಅಪೂರ್ಣವಾಗಿರುತ್ತದೆ. ಆದರೆ ಈ ಶುದ್ಧ ಕುಡಿಯುವ ನೀರಿನ ಘಟಕ ಪಂಚಾಯತ್ ಗೆ ಹಸ್ತಾಂತರ ಮಾಡಲಾಗಿದೆ ಎಂದು ಸುಳ್ಳು ಆರೋಪ ಮಾಡಿದ್ದಾರೆ ಎಂದರು.
ಅದೇ ರೀತಿ 14 ಮತ್ತು 15ನೇ ಹಣಕಾಸು ಯೋಜನೆ ಅಡಿಯಲ್ಲಿ ಎಸ್. ಸಿ, ಎಸ್ ಟಿ ಸಮುದಾಯಗಳಿಗೆ ಹಣ ಮಿಸಲು ಇಟ್ಟಿಲ್ಲ ಎಂದು ದೂರಲಾಗಿದೆ. ಗ್ರೆ ವಾಟರ್ ಕಾಮಗಾರಿ ಬಗ್ಗೆ ಒಂದು ಕೋಟಿ ರೂ. ಖರ್ಚಾಗಿದೆ ಎಂದು ದೂರಿದ್ದಾರೆ. ಅವರ ಈ ಎಲ್ಲ ಆರೋಪಗಳು ಸತ್ಯಕ್ಕೆ ದೂರವಾಗಿದೆ. ಈಗಾಗಲೇ ಈ ಎಲ್ಲ ಆರೋಪಗಳ ತನಿಖೆಗೆ ತಂಡ ರಚಿಸಲಾಗಿದ್ದು, ವರದಿ ಬರಬೇಕಿದೆ ಎಂದರು.
ಲಕ್ಷ್ಮಣ್ ಅವರು ವಿನಾ ಕಾರಣ ಸುಳ್ಳು ಆರೋಪ ಮಾಡಿ, ಸರ್ಕಾರದ ಯೋಜನೆಗಳು ಕಾರ್ಯರೂಪಕ್ಕೆ ತರಲು ಅಡ್ಡಿಪಡಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಇವರ ಮೇಲೆ ದೂರು ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಅನುಸೂಯಾ, ಉಪಾಧ್ಯಕ್ಷೆ ಜಗದೇವಿ, ಸದಸ್ಯರಾದ ಛಾಯಾ, ಶಿವಗಂಗಮ್ಮ, ಲಕ್ಷ್ಮೀಬಾಯಿ, ಜಿಲಾನಿ ಪಟೇಲ್, ಮಾಣಿಕ್ ಹಾಗೂ ತುಕ್ಕಣ್ಣ ಸೇರಿದಂತೆ ಇತರರು ಇದ್ದರು.