×
Ad

ಬೀದರ್ | ವನ್ಯಜೀವಿ-ಮಾನವ ನಡುವಿನ ಸಂಘರ್ಷ ಕಡಿಮೆಗೊಳಿಸಲು ರೈತರು ಸಹಕರಿಸಬೇಕು : ರಾಜಶೇಖರ ಧೂಪದ

Update: 2025-09-06 21:01 IST

ಬೀದರ್ : ವನ್ಯಜೀವಿಗಳು ಮತ್ತು ಮಾನವ ನಡುವಿನ ಸಂಘರ್ಷವನ್ನು ಕಡಿಮೆಗೊಳಿಸಲು ರೈತರು ಅರಣ್ಯ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಬೇನಚಿಂಚೋಳಿ ಶಾಖೆಯ ಉಪವಲಯದ ಅರಣ್ಯಾಧಿಕಾರಿ ರಾಜಶೇಖರ ಧೂಪದ ಅವರು ತಿಳಿಸಿದರು.

ಹುಮನಾಬಾದ್ ನಗರದ ಸರಕಾರಿ ನೌಕರರ ಭವನದಲ್ಲಿ, ಹುಮನಾಬಾದ್ ಪ್ರಾದೇಶಿಕ ಅರಣ್ಯ ವಲಯದ ವತಿಯಿಂದ ಹಮ್ಮಿಕೊಂಡಿದ್ದ ವನ್ಯ ಪ್ರಾಣಿಗಳು ಮತ್ತು ಮಾನವ ನಡುವಿನ ಸಂಘರ್ಷ ಕುರಿತು ರೈತರಿಗೆ ತಿಳುವಳಿಕೆ ನೀಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಾನವರಲ್ಲಿ ವನ್ಯಜೀವಿಗಳ ಬಗ್ಗೆ ತಿಳುವಳಿಕೆ ಇಲ್ಲದಿರುವುದು ಕೂಡ ವನ್ಯಜೀವಿ ಮತ್ತು ಮಾನವ ನಡುವಿನ ಸಂಘರ್ಷಕ್ಕೆ ಕಾರಣಗಳಲ್ಲಿ ಒಂದಾಗಿದೆ. ಈ ಸಂಘರ್ಷ ಕಡಿಮೆಗೊಳಿಸಲು ರೈತರು ಹಾಗೂ ಸಾರ್ವಜನಿಕರು ಅರಣ್ಯ ಇಲಾಖೆಯವರಿಗೆ ಸಹಕರಿಸಬೇಕು. ಆಗ ಮಾತ್ರ ಈ ಸಂಘರ್ಷವನ್ನು ಕಡಿಮೆಗೊಳಿಸಬಹುದು ಎಂದರು.

ನಿವೃತ್ತ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವಶರಣಪ್ಪ ಅರಳಿ ಅವರು ಮಾತನಾಡಿ, ವನ್ಯಜೀವಿಗಳು ಇಲ್ಲದಿದ್ದರೆ ಮನುಷ್ಯರಾದ ನಾವು ನೀರು, ಆಹಾರ ಇಲ್ಲದೆ ರೋಗಗ್ರಸ್ಥ ಪರಿಸರದಲ್ಲಿ ಇರಬೇಕಾಗುತ್ತದೆ. ಹಾಗಾಗಿ ನಮಗೆ ನೀರು, ಆಹಾರ ಎಷ್ಟು ಮುಖ್ಯವೋ, ವನ್ಯಜೀವಿಗಳು ಕೂಡ ಅಷ್ಟೇ ಮುಖ್ಯ ಎಂದು ತಿಳಿಸಿದರು.

ಹುಮನಾಬಾದ್ ಶಾಖೆಯ ಉಪವಲಯ ಅರಣ್ಯಾಧಿಕಾರಿ ಹರಿದಾಸ್ ಹೆಗಡೆ ಅವರು ಮಾತನಾಡಿ, ವನ್ಯಜೀವಿಗಳು ಮತ್ತು ಮಾನವ ನಡುವಿನ ಸಂಘರ್ಷವು ಕಡಿಮೆಗೊಳಿಸಲು ಸರ್ಕಾರವು ಸೋಲಾರ್‌ ತಂತಿಬೇಲಿ ರಿಯಾಯತಿ ದರದಲ್ಲಿ ನೀಡುತ್ತಿದೆ. ಆದ್ದರಿಂದ ರೈತರು ಅದರ ಉಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಗಸ್ತು ಅರಣ್ಯ ಪಾಲಕರಾದ ಜಗನ್ನಾಥ್, ಸಂತೋಷ್, ಅರಣ್ಯ ವೀಕ್ಷಕರಾದ ಗೋರಖ, ಸುನೀಲ್, ನೆಡುತೋಪು ಕಾವಲುಗಾರರಾದ ಮಹೇಶ್, ಕೈಲಾಸ್ ಹಾಗೂ ಬಲಭೀಮ್ ಸೇರಿದಂತೆ ರೈತ ಸಂಘಟನೆಯ ಮುಖಂಡರು, ಅರಣ್ಯ ಇಲಾಖೆಯ ವಿವಿಧ ಯೋಜನೆಗಳ ಫಲಾನುಭವಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News