×
Ad

ಬೀದರ್ | ಅನಧಿಕೃತವಾಗಿ ಸಂಗ್ರಹಿಸಿಟ್ಟ 32,180 ರೂ. ಮೌಲ್ಯದ ಪಟಾಕಿ ಜಪ್ತಿ : ಮೂವರ ಬಂಧನ

Update: 2025-09-25 22:49 IST

ಬೀದರ್ : ಔರಾದ್ (ಬಿ) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಒಂದು ಮನೆ ಹಾಗೂ ಗೋದಾಮಿನಲ್ಲಿ ಯಾವುದೇ ಅನುಮತಿ ಇಲ್ಲದೆ, ಸುರಕ್ಷತೆ ನಿಯಮಗಳನ್ನು ಅನುಸರಿಸದೇ, ಅನಧಿಕೃತವಾಗಿ ಸಂಗ್ರಹಿಸಿಟ್ಟಿದ್ದ ಸುಮಾರು 32,180 ರೂ. ಮೌಲ್ಯದ ಪಟಾಕಿಗಳು ಜಪ್ತಿ ಮಾಡಲಾಗಿದ್ದು, ಮೂವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಬುಧವಾರ ಔರಾದ್ (ಬಿ) ಪಟ್ಟಣದಲ್ಲಿ ಒಂದು ಮನೆ ಹಾಗೂ ಇನ್ನೊಂದು ಗೋದಾಮಿನಲ್ಲಿ ಸರ್ಕಾರದಿಂದ ಯಾವುದೇ ಅನುಮತಿ ಇಲ್ಲದೆ, ಯಾವುದೇ ಸುರಕ್ಷತೆ ನಿಯಮಗಳನ್ನು ಅನುಸರಿಸದೆ, ಅನಧಿಕೃತವಾಗಿ ಪಟಾಕಿಗಳನ್ನು ಸಂಗ್ರಹಿಸಿಟ್ಟಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಎಸ್ಪಿ ಪ್ರದೀಪ್ ಗುಂಟಿ ಅವರ ನಿರ್ದೇಶನದಂತೆ, ಹೆಚ್ಚುವರಿ ಎಸ್ಪಿ ಚಂದ್ರಕಾಂತ್ ಪೂಜಾರಿ, ಡಿವೈಎಸ್ಪಿ ಪವಾಡ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ರೇಣುಕಾ ಅವರ ತಂಡ ದಾಳಿ ನಡೆಸಿದೆ ಎಂದು ಅವರು ಹೇಳಿದ್ದಾರೆ.

ಔರಾದ್ (ಬಿ) ಪಟ್ಟಣದ ಟೀಚರ್ ಕಾಲೋನಿಯಲ್ಲಿದ್ದ ಮನೆ ಹಾಗೂ ಗೋದಾಮಿನ ಮೇಲೆ ದಾಳಿ ಮಾಡಿ ಪರಿಶೀಲಿಸಲಾಗಿ ಮನೆಯಲ್ಲಿ ಒಟ್ಟು 32,180 ರೂ. ಮೌಲ್ಯದ ಅನಧಿಕೃವಾಗಿ ಸಂಗ್ರಹಿಸಿಟ್ಟ ಪಟಾಕಿಗಳನ್ನು ಖಚಿತಪಡಿಸಿಕೊಂಡು 3 ಜನ ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಸರ್ಕಾರದಿಂದ ಯಾವುದೇ ರೀತಿಯ ಅನುಮತಿ ಪಡೆಯದೆ ಪಟಾಕಿಗಳು ಮನೆ, ಅಂಗಡಿ, ರಸ್ತೆ, ಗೋದಾಮಿನಲ್ಲಿ ಸಂಗ್ರಹಣೆ ಮಾಡಿ ಮಾರಾಟ ಮಾಡುವಂತಿಲ್ಲ. ಪಟಾಕಿ ಮಾರಾಟ ಮಾಡುವವರು ಸಂಬಂಧಪಟ್ಟ ಇಲಾಖೆಗಳಿಂದ ನಿರಾಕ್ಷೇಪಣಾ (ಎನ್ಓಸಿ) ಅನುಮತಿ ಪಡೆದಿರಬೇಕು. ಪಟಾಕಿಗಳನ್ನು ಸಂಗ್ರಹಣೆ ಮಾರಾಟ ಮಾಡಲು ಅನುಮತಿ ಪಡೆದ ನಿಗದಿತ ಸ್ಥಳಗಳಲ್ಲಿ ಮಾತ್ರ ಸಂಗ್ರಹಣೆ ಅಥವಾ ಮಾರಾಟ ಮಾಡಬೇಕು. ಮಾರಾಟ ಮಾಡಲು ಸರ್ಕಾರ ನಿಗದಿಪಡಿಸಿದ ಮಾರ್ಗಸೂಚಿಗಳನ್ವಯ ಸುರಕ್ಷತೆಯ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಹಾಗೆಯೇ ಮುಂಜಾಗ್ರತಾ ಕ್ರಮಗಳನ್ನು ಪಾಲಿಸದೆ ಜನರ ಆಸ್ತಿ, ಜೀವ ಹಾನಿಯುಂಟಾದಲ್ಲಿ ಅಂತಹ ಮಾಲೀಕ ಅಥವಾ ಮಾರಾಟ ಮಾಡುವವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸೂಚನೆಯ ಎಚ್ಚರಿಕೆ ನೀಡಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಔರಾದ್ (ಬಿ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News