×
Ad

ಬೀದರ್ | ಕಡಲೆ ಕಾಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ : ಸದುಪಯೋಗ ಪಡೆದುಕೊಳ್ಳಲು ರೈತರಿಗೆ ಮನವಿ

Update: 2025-01-29 19:30 IST

ಸಾಂದರ್ಭಿಕ ಚಿತ್ರ

ಬೀದರ್ : ಕಡಲೆ ಕಾಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಲಾಗಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಟಾಸ್ಕಫೋರ್ಸ್ ಸಮಿತಿಯ ಅಧ್ಯಕ್ಷರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸರಕಾರದ ಆದೇಶದಂತೆ ಇಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಟಾಸ್ಕಫೋರ್ಸ್ ಸಮಿತಿಯ ಅಧ್ಯಕ್ಷರ ಸಮ್ಮತಿಯಲ್ಲಿ ನಡೆದ ಸಭೆಯ ನಡವಳಿಗಳ ಪ್ರಕಾರ, ಬೀದರ್ ಜಿಲ್ಲೆಯಲ್ಲಿ FAQ ಗುಣಮಟ್ಟದ MSP ದರದಲ್ಲಿ ರೈತರಿಂದ ಕಡಲೆ ಕಾಳನ್ನು ಖರೀದಿಸಲು ಒಟ್ಟು 85 ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಮಾಹಿತಿ ನೀಡಲಾಗಿದೆ.

2024-25ನೇ ಸಾಲಿಗೆ ಭಾರತ ಸರಕಾರವು ಘೋಷಿಸಿರುವ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನಲ್ಲಿ ರೈತರು ಬೆಳೆದಿರುವ FAQ ಗುಣಮಟ್ಟದ ಕಡಲೆ ಕಾಳನ್ನು ಪ್ರತಿ ಕ್ವಿಂಟಾಲಿಗೆ 5,650 ರೂ. ದರದಲ್ಲಿ ಬೆಂಬಲ ಬೆಲೆ ಮಾರ್ಗಸೂಚಿಗಳ ಅನ್ವಯ ರೈತರಿಂದ ಖರೀದಿಸಲು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ವತಿಯಿಂದ ಖರೀದಿ ಸಂಸ್ಥೆಯನ್ನಾಗಿ ನೇಮಿಸಿ ರಾಜ್ಯ ಸರಕಾರ ಆದೇಶ ಮಾಡಿದೆ.

ರಾಜ್ಯ ಸರಕಾರದ ಆದೇಶ ಹೊರಡಿಸಿದ ದಿನಾಂಕದಿಂದ ರೈತರ ನೋಂದಣಿ ಕಾಲಾವಧಿಯನ್ನು 80 ದಿನಗಳವರೆಗೆ ಹಾಗೂ ಖರೀದಿ ಅವಧಿಯನ್ನು 90 ದಿನಗಳವರೆಗೆ ನಿಗದಿಪಡಿಸಿದೆ. ಖರೀದಿ ಪ್ರಕ್ರಿಯೆಯಲ್ಲಿ ರೈತರು ಪ್ರತಿ ಎಕರೆಗೆ ಗರಿಷ್ಠ 4 ಕ್ವಿಂಟಲ್ ನಂತೆ ಹಾಗೂ ಪ್ರತಿ ರೈತರಿಗೆ ಗರಿಷ್ಠ 20 ಕ್ವಿಂಟಲ್ ನಂತೆ FAQ ಗುಣಮಟ್ಟದ ಕಡಲೆ ಕಾಳು ಮಾರಾಟ ಮಾಡಬಹುದಾಗಿದೆ ಎಂದು ತಿಳಿಸಲಾಗಿದೆ.

ಖರೀದಿ ಕೇಂದ್ರಗಳು ಲಾಗ್ ಇನ್ ಕ್ರೆಡೆನ್ಸಿಯಲ್ಸಗಳನ್ನು ಪಡೆದು, ನೋಂದಣಿ ಪ್ರಕ್ರಿಯೆ ಪ್ರಾರಂಭಿಸಿದ ಮೇಲೆ ನೋಂದಣಿ ಮಾಡಿಕೊಳ್ಳಲು ಇಚ್ಛಿಸುವ ರೈತರು ಸಮೀಪದ ಖರೀದಿ ಕೇಂದ್ರಗಳಿಗೆ ನೋಂದಣಿ ಮಾಡಿಸಬೇಕು. ತಮ್ಮ ಕಡಲೆಕಾಳು ಉತ್ಪನ್ನವನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಮಾರಾಟ ಮಾಡಿ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪ್ರಕಟಣೆಯ ಮೂಲಕ ಮಾಹಿತಿ ನೀಡಲಾಗಿದೆ.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News