ಬೀದರ್ | ರಮಾಬಾಯಿ ಅಂಬೇಡ್ಕರ್ ಜಯಂತಿ ಸರಕಾರದ ವತಿಯಿಂದ ಆಚರಿಸಲು ಒತ್ತಾಯ
ಬೀದರ್ : ರಮಾಬಾಯಿ ಅಂಬೇಡ್ಕರ್ ಜಯಂತಿ ಸರ್ಕಾರದ ವತಿಯಿಂದ ಆಚರಿಸಬೇಕು ಎಂದು ಬಸವಕಲ್ಯಾಣದಲ್ಲಿ ಮಾನವ ಬಂಧುತ್ವ ವೇದಿಕೆ ಒತ್ತಾಯಿಸಿದೆ.
ಇಂದು ಶಾಸಕ ಶರಣು ಸಲಗರ್ ಅವರನ್ನು ಮನವಿ ಪತ್ರ ಸಲ್ಲಿಸಿ, ಭಾರತ ದೇಶಕ್ಕೆ ಅತ್ಯಂತ ಶ್ರೇಷ್ಠ ಸಂವಿಧಾನ ನೀಡಿರುವ ಮಹಾನ್ ಮಾನವತಾವಾದಿ, ಭಾರತ ರತ್ನ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಧರ್ಮಪತ್ನಿಯಾದ ತ್ಯಾಗ, ಸ್ಪೂರ್ತಿಯ ಸಂಕೇತ ಮಾತೆ ರಮಾಬಾಯಿ ಅಂಬೇಡ್ಕರ್ ಅವರ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸಬೇಕು ಎಂದು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಕೋರಲಾಯಿತು.
ಮನವಿ ಪತ್ರವನ್ನು ಸ್ವೀಕರಿಸಿ ಮಾತನಾಡಿದ ಶರಣು ಸಲಗರ್ ಅವರು, ನಾನು ಆದಷ್ಟು ಬೇಗ ಮುಖ್ಯಮಂತ್ರಿಗಳಿಗೆ ಭೇಟಿ ಮಾಡಿ, ಮಾತೋಶ್ರೀ ರಮಾಬಾಯಿ ಅಂಬೇಡ್ಕರ್ ಅವರ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸಲು ಒತ್ತಡ ಹಾಕುತ್ತೇನೆ ಎಂದು ಮನವಿಗೆ ಸ್ಪಂದಿಸಿ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಸಂದರ್ಭದಲ್ಲಿ ಮಾನವ ಬಂಧುತ್ವ ವೇದಿಕೆ ತಾಲ್ಲೂಕು ಸಂಚಾಲಕ ಪಿಂಟು ಕಾಂಬಳೆ, ಉಪಾಧ್ಯಕ್ಷ ಗೌತಮ ಖರ್ಗೆ, ದಲಿತ ಹಿರಿಯ ಮುಖಂಡ ದೀಪಕ್ ಗಾಯಕವಾಡ್ ಹಾಗೂ ಸಮತಾ ಸೈನಿಕ ದಳದ ರಾಜ್ಯ ಸಮಿತಿ ಸದಸ್ಯ ದತ್ತಾತ್ರೇಯ ಸೂರ್ಯವಂಶಿ ಸೇರಿದಂತೆ ಇತರರು ಭಾಗವಹಿಸಿದ್ದರು.