×
Ad

ಬೀದರ್ | ಉತ್ತಮ ಫಲಿತಾಂಶ ನೀಡಿ ಇಲ್ಲದಿದ್ದರೆ ಕೆಲಸ ಬಿಟ್ಟು ಹೋಗಿ : ಶಿಕ್ಷಕರಿಗೆ ಶಾಸಕ ಪ್ರಭು ಚವ್ಹಾಣ್‌ ಎಚ್ಚರಿಕೆ

Update: 2025-06-23 18:29 IST

ಬೀದರ್ : ಶಿಕ್ಷಣದ ಸುಧಾರಣೆಗೆ ನಾನು ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದ್ದೇನೆ. ಆದರೂ ಫಲಿತಾಂಶ ಕುಸಿಯುತ್ತಿದೆ. ಈ ಬಾರಿ ಎಲ್ಲ ಶಾಲೆಗಳಲ್ಲಿ ಉತ್ತಮ ಫಲಿತಾಂಶ ಬರುವ ನಿರೀಕ್ಷೆ ಹೊಂದಿದ್ದೇನೆ. ಉತ್ತಮ ಫಲಿತಾಂಶ ನೀಡಿ ಇಲ್ಲದಿದ್ದರೆ ತಾವು ಸ್ವ ಇಚ್ಛೆಯಿಂದ ಕೆಲಸ ಬಿಟ್ಟು ಹೋಗಿ ಶಾಸಕ ಪ್ರಭು ಚವ್ಹಾಣ್ ಅವರು ಅಧಿಕಾರಿ ಮತ್ತು ಶಿಕ್ಷಕರಿಗೆ ಎಚ್ಚರಿಕೆ ನೀಡಿದರು.

ಇಂದು ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಔರಾದ್(ಬಿ) ತಾಲ್ಲೂಕು ಪಂಚಾಯತ್ ಕಛೇರಿ ಸಭಾಂಗಣದಲ್ಲಿ ನಡೆದ ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರೌಢ ಶಾಲಾ ಮುಖ್ಯಶಿಕ್ಷಕರ ಸಭೆ ಮತ್ತು ಶೈಕ್ಷಣಿಕ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಶಿಕ್ಷಕರ ಮೇಲಿನ ಗೌರವದಿಂದಾಗಿ ಇಷ್ಟು ದಿನ ಸುಮ್ಮನಿದ್ದೇನೆ. ಶಿಕ್ಷಕರು ಪ್ರತಿ ಬಾರಿ ಉತ್ತಮ ಫಲಿತಾಂಶ ನೀಡುವುದಾಗಿ ಕೇವಲ ಆಶ್ವಾಸನೆ ನೀಡುತ್ತಾ ಬರುತ್ತಿದ್ದೀರಿ. ಆದರೆ ಫಲಿತಾಂಶದಲ್ಲಿ ಸುಧಾರಣೆ ಕಂಡಿಲ್ಲ. ಹಿಂದೆ ಶೇ.82 ಇದ್ದ ಫಲಿತಾಂಶ ಇವಾಗ ಶೇ.55ಕ್ಕೆ ಕುಸಿದಿರುವುದು ಮುಜುಗರದ ಸಂಗತಿಯಾಗಿದೆ. ಈ ಬಾರಿ ಯಾವುದೇ ಕಾರಣಕ್ಕೂ ಸುಮ್ಮನೆ ಬಿಡುವುದಿಲ್ಲ. ಅಗತ್ಯವೆನಿಸಿದರೆ ರಸ್ತೆಗಿಳಿದು ಪ್ರತಿಭಟನೆ ಮಾಡುವುದಕ್ಕೂ ನಾನು ಸಿದ್ದನಿದ್ದೇನೆ. ಶಿಕ್ಷಣಕ್ಕಾಗಿ ಯಾವ ಮಟ್ಟಕ್ಕಾದರೂ ಇಳಿಯುತ್ತೇನೆ ಎಂದು ಗುಡುಗಿದರು.

ಬಹುತೇಕ ಖಾಸಗಿ ಶಾಲೆಗಳಲ್ಲಿ ನುರಿತ ಶಿಕ್ಷಕರು ಇರುವುದಿಲ್ಲ. ಆದರೂ ಅಲ್ಲಿ ಉತ್ತಮ ಫಲಿತಾಂಶ ಬರುತ್ತದೆ. ಸರ್ಕಾರಿ ಶಾಲೆಗಳಲ್ಲಿ ಎಲ್ಲರೂ ಅರ್ಹತೆ ಹೊಂದಿರುವ ಶಿಕ್ಷಕರೇ ಇದ್ದರೂ ಕೂಡ ಫಲಿತಾಂಶ ಬಾರದಿರುವುದು ಬೇಸರ ಮೂಡಿಸುತ್ತಿದೆ. ಎಲ್ಲ ಶಿಕ್ಷಕರು ಸಮಯಕ್ಕೆ ಸರಿಯಾಗಿ ಶಾಲೆಗೆ ಬರಬೇಕು. ವೇಳಾಪಟ್ಟಿಯಂತೆ ಪಾಠ ಮಾಡಬೇಕು. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ತೆಗೆದುಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಜೆ ರಂಗೇಶ್, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ್ ಸೂರ್ಯವಂಶಿ, ಬಿಆರ್‌ಸಿ ಪ್ರಕಾಶ್ ರಾಠೋಡ್, ಬಿಸಿಯೂಟ ಅಧಿಕಾರಿ ಧೂಳಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪಂಢರಿ ಆಡೆ, ಕಸಾಪ ಅಧ್ಯಕ್ಷ ಬಾಲಾಜಿ ಅಮರವಾಡಿ, ತಾಲ್ಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಶಿವಕುಮಾರ್ ಘಾಟೆ ಹಾಗೂ ಬಲಭೀಮ್ ಕುಲಕರ್ಣಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News