ಬೀದರ್ | ಕಾರ್ಯಕ್ರಮ, ಯೋಜನೆಗಳು ಯಶಸ್ವಿಯಾಗಬೇಕಾದರೆ ಜನಜಾಗೃತಿ ಮುಖ್ಯ : ಡಾ.ಶಂಕ್ರೆಪ್ಪಾ ಮೈಲಾರೆ
ಬೀದರ್ : ಪ್ರತಿಯೊಂದು ಇಲಾಖೆಯ ಯಾವುದೇ ಕಾರ್ಯಕ್ರಮ ಹಾಗೂ ಯೋಜನೆಗಳು ಯಶಸ್ವಿಯಾಗಬೇಕಾದರೆ ಜನಜಾಗೃತಿ ಮುಖ್ಯವಾಗಿದೆ ಎಂದು ಕಲಬುರಗಿ ವಿಭಾಗೀಯ ಜಂಟಿ ನಿರ್ದೇಶಕ ಡಾ.ಶಂಕ್ರೆಪ್ಪಾ ಮೈಲಾರೆ ಹೇಳಿದರು.
ಇಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಕಲಬುರಗಿ ವಿಭಾಗ ಮಟ್ಟದ ಐಇಸಿ ಪರಿಶೀಲನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತಾವೆಲ್ಲರೂ ಕ್ಷೇತ್ರ ಮಟ್ಟದಿಂದ ಜಿಲ್ಲಾ ಮಟ್ಟದವರೆಗೂ ವಿವಿಧ ಮಾಧ್ಯಮ, ವಿಧಾನ ಹಾಗೂ ಸಂವಹನದ ಮೂಲಕ ಹಲವಾರು ಆರೋಗ್ಯ ಕಾರ್ಯಕ್ರಮಗಳ ಕುರಿತು ಅರಿವು ಮೂಡಿಸುತ್ತಿರುವ ಫಲವಾಗಿ ಆರೋಗ್ಯ ಕಾರ್ಯಕ್ರಮಗಳು ಯಶಸ್ವಿಯಾಗಿ ಅನುಷ್ಠಾನವಾಗುತ್ತಿವೆ. ಮಾಹಿತಿ ಶಿಕ್ಷಣ ಸಂವಹನ ಚಟುವಟಿಕೆಗಳು ಹೊಸ ಹೊಸ ಅನ್ವೇಷಣೆಗಳನ್ನು ಅಳವಡಿಸಿಕೊಂಡು ಯಶಸ್ವಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಕರೆ ನೀಡಿದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸಂಗಪ್ಪ ಕಾಂಬಳೆ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರತಿ ವರ್ಷವೂ ರೊಟೇಶನ್ ಮೂಲಕ ಒಂದೊಂದು ಜಿಲ್ಲೆಯಲ್ಲಿ ಐಇಸಿ ಪ್ರಗತಿ ಪರಿಶೀಲನಾ ಕಾರ್ಯಕ್ರಮ ಜರುಗುತ್ತಿದ್ದು, ಈ ಬಾರಿ ಬೀದರ್ ಜಿಲ್ಲೆಗೆ ಈ ಅವಕಾಶ ದೊರಕಿದೆ. ಹೊಸ ಹೊಸ ಕಾರ್ಯಕ್ರಮಗಳ ಅನುಷ್ಠಾನ ಮತ್ತು ಹೊಸ ಹೊಸ ವಿಧಾನ ಅಳವಡಿಸಿಕೊಳ್ಳುವುದು ಹಾಗೂ ಬೇರೆ ಜಿಲ್ಲೆಗಳಲ್ಲಿ ಯಶಸ್ವಿಯಾಗಿ ನಿರ್ವಹಣೆಯಾದ ಚಟುವಟಿಕೆಗಳನ್ನು ಉಳಿದ ಎಲ್ಲಾ ಜಿಲ್ಲೆಗಳಲ್ಲಿಯೂ ಅನುಷ್ಠಾನಗೊಳಿಸುವ ಉದ್ದೇಶದೊಂದಿಗೆ ಈ ಕಾರ್ಯಕ್ರಮ ಜರುಗಿಸಲಾಗುತ್ತದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಕಲಬುರಗಿ ವಿಭಾಗೀಯ ಜಂಟಿ ನಿರ್ದೇಶನಾಲಯ ಸಹಾಯಕ ನಿರ್ದೇಶಕ ಡಾ.ಶರಣಬಸಪ್ಪ ಗಣಜಲಖೇಡ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಧ್ಯಾನೇಶ್ವರ್ ನೀರಗುಡೆ, ಬೆಂಗಳೂರಿನ ರಾಜ್ಯ ಐಇಸಿ ಕೋಶ ಸಂಯೋಜಕ ಡಾ.ಹಂಸರೇಖಾ, ಜಿಲ್ಲಾ ಆರ್ ಸಿ ಹೆಚ್ ಅಧಿಕಾರಿ ಡಾ.ಶಿವಶಂಕರ್ ಬಿ., ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ದೀಲಿಪ್ ಡೋಂಗರೆ, ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿ ಡಾ.ಕಿರಣ್ ಪಾಟೀಲ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಎಸ್.ಕೆ.ಬೊಮ್ಮಾ, ಶ್ರೀಶೈಲ್ ದೀವಟಗಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಹಾಗೂ ಕಲಬುರಗಿ ವಿಭಾಗದ ಎಲ್ಲಾ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಹಾಗೂ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.