×
Ad

ಬೀದರ್ | ನರೇಗಾ ಕೂಲಿಕಾರರಿಗೆ ವಿಮೆ ಮಾಡಿಸಿ : ಅಧಿಕಾರಿಗಳಿಗೆ ಸಿಇಓ ಡಾ.ಗಿರೀಶ್ ಬದೋಲೆ ಸೂಚನೆ

Update: 2025-07-21 21:58 IST

ಬೀದರ್ : ಕೇಂದ್ರ ಸರಕಾರವು ನರೇಗಾ ಯೋಜನೆ ಸೇರಿದಂತೆ ವಿವಿಧ ಯೋಜನೆಗಳಡಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ವಿಮೆ ಮಾಡಿಸಲು ಅವಕಾಶ ಮಾಡಿರುವುದರಿಂದ ನರೇಗಾ ಕೂಲಿಕಾರರ ವಿಮೆ ಮಾಡಿಸಿ ಅವರ ಆಪತ್ತಿನ ಕಾಲದಲ್ಲಿ ನೆರವಾಗಿ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ಬದೋಲೆ ಅವರು ಅಧಿಕಾರಿಗಳಿಗೆ ತಿಳಿಸಿದರು.

ಇಂದು ಜಿಲ್ಲಾ ಪಂಚಾಯತ್ ನಲ್ಲಿ ಜಿಲ್ಲೆಯ ಎಲ್ಲಾ ಕಾರ್ಯನಿರ್ವಾಹಕ ಅಧಿಕಾರಿ, ಎಇಇಗಳು, ಎಡಿಗಳು ಹಾಗೂ ಪಿಡಿಒ ಅವರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಬೀದರ್‌ ಜಿಲ್ಲೆಯ ಮನರೇಗಾ ಕೂಲಿಕಾರರ ವಿಮೆ ಮಾಡಿಸಲು ಜಿಲ್ಲಾ ಪಂಚಾಯತಿಯಿಂದ ಅಭಿಯಾನ ಹಮ್ಮಿಕೊಂಡು ಪ್ರಗತಿ ಸಾಧಿಸಲು ಸೂಚಿಸಲಾಗಿದ್ದು, ಜು.18 ರಿಂದ ಆ.18 ರವರೆಗೆ ಒಂದು ತಿಂಗಳ ಕಾಲ ಮನರೇಗಾ ಕೂಲಿಕಾರರ ವಿಮೆ ಮಾಡಿಸಲು ಅಭಿಯಾನ ಕೈಗೊಳ್ಳಲಾಗಿದೆ. ಈ ಅಭಿಯಾನದ ಅವಧಿಯಲ್ಲಿ ಜಿಲ್ಲೆಯ ಎಲ್ಲಾ 5,04,890 ಗ್ರಾಮೀಣ ಕೂಲಿಕಾರರ ವಿಮಾ ಯೋಜನೆಗಳಲ್ಲಿ ಕೂಲಿಕಾರರನ್ನು ಕಡ್ಡಾಯವಾಗಿ ನೊಂದಣಿ ಮಾಡಿಸತಕ್ಕದ್ದು. ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಸಹಾಯಕ ನಿರ್ದೇಶಕರು ವಿಶೇಷ ಆಸಕ್ತಿ ವಹಿಸಿ ನರೇಗಾ ಕೂಲಿಕಾರರ ಶೇ.100 ರಷ್ಟು ವಿಮೆ ಮಾಡಿಸಬೇಕು ಎಂದು ಅವರು ಸೂಚಿಸಿದರು.

ನರೇಗಾ ಕೂಲಿಕಾರರಾಗಿ ಕೆಲಸ ಮಾಡುತ್ತಿರುವ ಗ್ರಾಮೀಣ ಕೂಲಿಕಾರರನ್ನು ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ (PMJJBY) ಯಡಿ ವಾರ್ಷಿಕ 436 ರೂ. ಗಳ ವಿಮಾ ಕಂತು ಪಾವತಿಸಿದರೆ 2 ಲಕ್ಷ ರೂ. ಗಳ ಜೀವವಿಮೆ ಪಡೆಯಬಹುದು. ಗ್ರಾಮೀಣ ಪ್ರದೇಶದ 18 ರಿಂದ 50 ವಯೋಮಾನದ, ಬ್ಯಾಂಕ್ ಖಾತೆ ಹೊಂದಿರುವ ಫಲಾನುಭವಿಗಳು ಈ ಸೌಲಭ್ಯ ಪಡೆಯಲು ಅರ್ಹರಿದ್ದಾರೆ. ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ (PMJJBY) ಯು ವಾರ್ಷಿಕ 20 ರೂ. ಗಳ ವಿಮಾ ಕಂತು ಪಾವತಿಸುವ 18 ರಿಂದ 70 ವಯೋಮಾನದವರು ಈ ಯೋಜನೆಯಡಿ ನೊಂದಾಯಿಸಿಕೊಳ್ಳಬಹುದು. ಅಪಘಾತದ ಸಂದರ್ಭದಲ್ಲಿ 2 ಲಕ್ಷ ರೂ. ಗಳವರೆಗೆ ವಿಮೆ ಪಡೆಯಬಹುದಾಗಿದೆ ಎಂದರು.

ಪ್ರಧಾನ ಮಂತ್ರಿ ಆರೋಗ್ಯ ಯೋಜನೆಯಡಿ ಸರಕಾರದಿಂದ ಗುರುತಿಸಲ್ಪಟ್ಟ ಸಾರ್ವಜನಿಕ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಈ ಯೋಜನೆಯಡಿ ನೊಂದಾಯಿತ ಕುಟುಂಬಗಳಿಗೆ ವಾರ್ಷಿಕ 5 ಲಕ್ಷ ರೂ. ಗಳವರೆಗೆ ನಗದು ರಹಿತ ವೈದ್ಯಕೀಯ ಸೌಲಭ್ಯ ನೀಡಲಾಗುವುದು. ನರೇಗಾ ಯೋಜನೆಯು ಗ್ರಾಮೀಣ ಕೂಲಿಕಾರರಿಗೆ ವರ್ಷದಲ್ಲಿ ಒಂದು ನೂರು ದಿನಗಳ ಉದ್ಯೋಗ ಖಾತ್ರಿ ನೀಡುವುದರ ಜೊತೆಗೆ ಹಲವಾರು ಮಾನವೀಯ ಅಂಶಗಳು ಹೊಂದಿದೆ. ಕೇಂದ್ರ ಸರಕಾರದ ಈ ವಿಮಾ ಯೋಜನೆಗಳು ನರೇಗಾ ಕೂಲಿಕಾರರು ಕೆಲಸದಲ್ಲಿ ಮೃತಪಟ್ಟಾಗ ಇಲ್ಲವೆ ಗಾಯಗೊಂಡಾಗ ಅವರಿಗೆ ನೆರವು ಆಗುವ ಯೋಜನೆಗಳಾಗಿದ್ದು, ಕಾರ್ಯನಿರ್ವಾಹಕ ಅಧಿಕಾರಿ, ಎ.ಡಿ ಮತ್ತು ಪಿಡಿಒಗಳು ಕೂಲಿಕಾರರ ಬದುಕಿಗೆ ಭದ್ರತೆ ಒದಗಿಸುವ ಈ ಯೋಜನೆಗಳ ಬಗ್ಗೆ ವೈಯಕ್ತಿಕ ಆಸಕ್ತಿ ವಹಿಸಿ ಎಲ್ಲಾ ಕೂಲಿಕಾರರನ್ನು ನೊಂದಾಯಿಸಬೇಕು ಎಂದು ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಉಪಕಾರ್ಯದರ್ಶಿ ಮುಕ್ಕಣ್ಣ ಕರಿಗಾರ್, ಯೋಜನಾ ನಿರ್ದೇಶಕ ಜಗನ್ನಾಥ್ ಮೂರ್ತಿ, ಸಹಾಯಕ ಕಾರ್ಯದರ್ಶಿ ಬೀರೇಂದ್ರ ಸಿಂಗ್, ಸಹಾಯಕ ನಿರ್ದೇಶಕ ಜಯಪ್ರಕಾಶ್ ಚೌವ್ಹಾಣ್, ಪಿ.ಆರ್.ಇ.ಡಿ ಯ ಕಾರ್ಯಪಾಲಕ ಇಂಜಿನಿಯರ್ ಶಿವಾಜಿ ಡೋಣಿ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಖಲೀಮುದ್ದೀನ್, ಗ್ರಾಮೀಣ ಕುಡಿಯುವ ನೀರು, ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮಾಣಿಕರಾವ್ ಕೆರೂರ್, ಅಧೀಕ್ಷಕ ಮಹ್ಮದ್ ಬಶೀರ್, ಡಿ.ಪಿ.ಎಂ ವಾಸೀಮ್ ಪರ್ವೇಜ್, ಎಡಿಪಿಸಿ ದೀಪಕ್ ಕಡಿಮನಿ, ಸಾಮಾಜಿಕ ಲೆಕ್ಕ ಪರಿಶೋಧನೆ ಜಿಲ್ಲಾ ವ್ಯವಸ್ಥಾಪಕ ದೇವಿದಾಸ್, ಗುರುರಾಜ್, ಲೊಕೇಶ್, ರಜನಿಕಾಂತ್, ಅಂಬಿಕಾ, ಕೋಮಲ್ ಹಾಗೂ ಧನರಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News