×
Ad

Bidar | ಉತ್ತಮ ಸಮಾಜ ನಿರ್ಮಿಸಲು ಪುಸ್ತಕ ಓದು ಅಗತ್ಯ : ಪ್ರೊ.ಸಿದ್ರಾಮಪ್ಪಾ ಮಾಸಿಮಾಡೆ

► ಸಾಹಿತಿ ಶಿಲ್ಪಾ ಮಜಗೆ ಅವರ ಮನೆಯಲ್ಲಿ ʼಪುಸ್ತಕ ಕುಂಜʼ ನೂತನ ಗ್ರಂಥಾಲಯ ಕೋಣೆ ಉದ್ಘಾಟನೆ ► ‘ಮನೆಗೊಂದು ಗ್ರಂಥಾಲಯ’ ಅಭಿಯಾನಕ್ಕೆ ಚಾಲನೆ

Update: 2026-07-15 18:11 IST

ಬೀದರ್, ಜು.16: ಪುಸ್ತಕಗಳ ಓದಿನಿಂದ ಬೌದ್ಧಿಕ ಪ್ರಬುದ್ಧತೆ ಬೆಳೆಯುತ್ತಿದ್ದು, ಉತ್ತಮ ಸಮಾಜ ನಿರ್ಮಾಣಕ್ಕೆ ಓದಿನ ಸಂಸ್ಕೃತಿ ಅತ್ಯಗತ್ಯವಾಗಿದೆ ಎಂದು ವಚನಾಮೃತ ಕನ್ನಡ ಸಂಘದ ಅಧ್ಯಕ್ಷ ಪ್ರೊ. ಸಿದ್ರಾಮಪ್ಪಾ ಮಾಸಿಮಾಡೆ ಹೇಳಿದರು.

ನಗರದ ಗುಮ್ಮೆ ಬಡಾವಣೆಯ ಸಾಹಿತಿ ಶಿಲ್ಪಾ ಮಜಗೆ ಅವರ ನಿವಾಸದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಜಿಲ್ಲಾ ಜಾಗೃತ ಸಮಿತಿಯ ಸಹಯೋಗದಲ್ಲಿ ಆಯೋಜಿಸಿದ್ದ ‘ಮನೆಗೊಂದು ಗ್ರಂಥಾಲಯ’ ಅನುಷ್ಠಾನ ಕಾರ್ಯಕ್ರಮ ಮತ್ತು ‘ಪುಸ್ತಕ ಕುಂಜ’ ನೂತನ ಗ್ರಂಥಾಲಯ ಕೋಣೆ ಉದ್ಘಾಟಿಸಿ ಅವರು ಮಾತನಾಡಿದರು.

ಪುಸ್ತಕಗಳು ಕಲೆ, ಸಾಹಿತ್ಯ, ಸಂಸ್ಕೃತಿ ಸೇರಿದಂತೆ ಜಗತ್ತಿನ ಜ್ಞಾನವನ್ನು ಪರಿಚಯಿಸುತ್ತವೆ. ಉತ್ತಮ ವ್ಯಕ್ತಿತ್ವ ರೂಪಿಸುವಲ್ಲಿ ಹಾಗೂ ಓದಿನ ಅಭಿರುಚಿ ಬೆಳೆಸುವಲ್ಲಿ ಗ್ರಂಥಾಲಯಗಳ ಪಾತ್ರ ಮಹತ್ವದ್ದಾಗಿದೆ. ಪ್ರತಿಯೊಂದು ಮನೆಯಲ್ಲಿ ಪುಸ್ತಕಗಳಿಗಾಗಿ ಪ್ರತ್ಯೇಕ ಸ್ಥಳ ಮೀಸಲಿಟ್ಟು ಓದಿನ ಸಂಸ್ಕೃತಿ ಬೆಳೆಸಬೇಕು ಎಂದು ಅವರು ಕರೆ ನೀಡಿದರು.

ಹಿರಿಯ ಸಾಹಿತಿ ಭಾರತಿ ವಸ್ತ್ರದ್ ಮಾತನಾಡಿ, ಆಧುನಿಕ ಜೀವನಶೈಲಿಯಿಂದ ಓದಿನ ಅಭಿರುಚಿ ಕಡಿಮೆಯಾಗುತ್ತಿದೆ. ಆದರೆ ಪುಸ್ತಕಗಳು ಜ್ಞಾನ, ಏಕಾಗ್ರತೆ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವ ಶಕ್ತಿಯುತ ಸಾಧನವಾಗಿದ್ದು, ಪ್ರತಿಯೊಂದು ಮನೆಯಲ್ಲೂ ಗ್ರಂಥಾಲಯ ನಿರ್ಮಾಣವಾಗಬೇಕು ಎಂದು ಹೇಳಿದರು.

ಜಿಲ್ಲಾ ಜಾಗೃತ ಸಮಿತಿ ಸಂಚಾಲಕ ಬಾಲಾಜಿ ಕುಂಬಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಮನೆ-ಮನೆಗಳಲ್ಲಿ ಪುಸ್ತಕ ಓದುವ ಸಂಸ್ಕೃತಿ ಬೆಳೆಸುವ ಉದ್ದೇಶದಿಂದ ಜಿಲ್ಲೆಯಾದ್ಯಂತ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಸಾಹಿತಿ ಶಿಲ್ಪಾ ಮಜಗೆ ಹಾಗೂ ಹಿರಿಯ ಸಾಹಿತಿ ರಘುಶಂಖ ಭಾತಂಬ್ರಾ ಪುಸ್ತಕಗಳ ಮಹತ್ವ ಕುರಿತು ಮಾತನಾಡಿದರು. ಇದೇ ಸಂದರ್ಭದಲ್ಲಿ ಶಿಲ್ಪಾ ಮಜಗೆ ಅವರ ಮನೆಯಲ್ಲಿ ಸ್ಥಾಪಿಸಲಾದ ‘ಪುಸ್ತಕ ಕುಂಜ’ ನೂತನ ಗ್ರಂಥಾಲಯ ಕೋಣೆಯನ್ನು ಉದ್ಘಾಟಿಸಲಾಯಿತು.

ಈ ಸಂದರ್ಭದಲ್ಲಿ ಮನೆಗೊಂದು ಗ್ರಂಥಾಲಯ ಜಿಲ್ಲಾ ಜಾಗೃತ ಸಮಿತಿಯ ಸದಸ್ಯೆ ಜಯದೇವಿ ಯದಲಾಪುರೆ, ಲಕ್ಷ್ಮಣ್ ಮೇತ್ರೆ, ಶಂಭುಲಿಂಗ್ ವಾಲ್ದೊಡ್ಡಿ, ಮಹೇಶ್ ಮಜಗೆ, ಹಂಸಕವಿ, ಶೈಲಜಾ ಹುಡಗೆ, ಕೀರ್ತಿಲತಾ ಹೊಸಳ್ಳಿ, ಮಹೇಶ್ವರಿ ಹೇಡೆ, ಸಿದ್ದಮ್ಮ ಹಳಕಾಯಿ, ನಾಗಯ್ಯ ಸ್ವಾಮಿ, ಜಗದೇವಿ ತಿಬಶೆಟ್ಟಿ, ಆರ್.‌ಎಸ್.ಬಿರಾದರ್‌, ಬಸವರಾಜ್ ಸಿಂದಬಂದಗೆ, ದಿನೇಶ್ ಕೊಂಡಾ ಸೇರಿದಂತೆ ಇತರರು ಉಪಸ್ಥಿತರಿದ್ದರು. ಲಕ್ಷ್ಮಿ ಬಿರಾದರ್‌ ಸ್ವಾಗತಿಸಿದರು. ಸ್ವರೂಪರಾಣಿ ನಾಗೂರೆ ನಿರೂಪಿಸಿದರು. ಆಶಾ ಕೋಟೆ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News