ಬೀದರ್ | ಎಲ್ಲಾ ಹೆರಿಗೆಗಳು ಸರಕಾರಿ ಆಸ್ಪತ್ರೆಗಳಲ್ಲಿ ನಡೆಯುವಂತೆ ನೋಡಿಕೊಳ್ಳಬೇಕು : ಡಾ.ಧ್ಯಾನೇಶ್ವರ್ ನೀರಗುಡೆ
ಬೀದರ್ : ಎಲ್ಲಾ ಹೆರಿಗೆಗಳು ಸರಕಾರಿ ಆಸ್ಪತ್ರೆಗಳಲ್ಲಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಧ್ಯಾನೇಶ್ವರ್ ನೀರಗುಡೆ ಆಶಾ ಕಾರ್ಯಕರ್ತರಿಗೆ ತಿಳಿ ಹೇಳಿದರು.
ಇಂದು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ (ಕೆ.ಎಸ್.ಸಿ.ಎಸ್.ಟಿ) ಬೆಂಗಳೂರು, ಕೆ.ಎಸ್.ಸಿ.ಎಸ್.ಟಿ ಪ್ರಾದೇಶಿಕ ಕೇಂದ್ರ ಕಲಬುರಗಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೀದರ್, ಹಾಗೂ ಜಿಲ್ಲಾ ಪಂಚಾಯತ್ ಬೀದರ್ ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಮಹಿಳೆಯರು ಮತ್ತು ಮಕ್ಕಳಲ್ಲಿ ಆರೋಗ್ಯ, ನೈರ್ಮಲ್ಯ ಮತ್ತು ಪೌಷ್ಟಿಕಾಂಶಗಳ ಪ್ರಾಮುಖ್ಯತೆ ಕುರಿತು ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಗರ್ಭಿಣಿ ಮಹಿಳೆಯರ ಮನೆ ಮನೆಗೆ ಭೇಟಿ ನೀಡಿ ತಾಯಿ ಮತ್ತು ಮಕ್ಕಳ ಆರೋಗ್ಯದ ಕುರಿತು ಮಾಹಿತಿ ನೀಡಬೇಕು. ಗರ್ಭಿಣಿಯರಿಗೆ ಕಡ್ಡಾಯವಾಗಿ ನಾಲ್ಕು ಬಾರಿ ವೈದ್ಯಕೀಯ ಪರೀಕ್ಷೆ ಮಾಡಿಸಬೇಕು. ಖಾಸಗಿ ಆಸ್ಪತ್ರೆಗಳಿಗೆ ಅವಲಂಬನೆ ಕಡಿಮೆ ಮಾಡುವ ಅಗತ್ಯವಿದ್ದು, ಸರಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಬೇಕು. ತಾಯಿ ಮತ್ತು ಮಗು ಆರೋಗ್ಯ ಸಮಸ್ಯೆಯಿಂದ ಪ್ರಾಣ ಕಳೆದುಕೊಳ್ಳದಂತೆ ಜನಜಾಗೃತಿ ಮೂಡಿಸಬೇಕು ಎಂದು ಅವರು ಆಶಾ ಕಾರ್ಯಕರ್ತರಿಗೆ ತಿಳಿಸಿದರು.
ಬೆಂಗಳೂರಿನ ಕೆ.ಎಸ್.ಸಿ.ಎಸ್.ಟಿ ಯೋಜನಾ ಅಭಿಯಂತರರಾದ ಡಾ.ಸೈಯದ್ ಸಮೀರ್ ಪ್ರಸ್ತಾವಿಕ ನುಡಿಗಳಲ್ಲಿ, ಆರೋಗ್ಯ, ನೈರ್ಮಲ್ಯ ಮತ್ತು ಪೌಷ್ಠಿಕತೆ ಕುರಿತು ಆಶಾ ಕಾರ್ಯಕರ್ತೆಯರು ಈ ಕಾರ್ಯಾಗಾರದಿಂದ ಸೂಕ್ತ ತರಬೇತಿ ಪಡೆದು, ಅದನ್ನು ಜನಸಾಮಾನ್ಯರಿಗೆ ತಲುಪಿಸುವ ಜವಾಬ್ದಾರಿ ಹೊತ್ತುಕೊಳ್ಳಬೇಕು. ಉತ್ತಮ ಆರೋಗ್ಯ ನಮ್ಮೆಲ್ಲರ ಹಕ್ಕು. ಪ್ರತಿಯೊಬ್ಬರು ತಾವು ಮಾಡುವ ಕೆಲಸವನ್ನು ಪ್ರಾಮಾಣಿಕವಾಗಿ ಮತ್ತು ನಿಷ್ಪಕ್ಷವಾಗಿ ಮಾಡಿ ಒಂದು ಉತ್ತಮ ಆರೋಗ್ಯಕರ ಸಮಾಜದ ನಿರ್ಮಾಣ ಮಾಡಬೇಕು ಎಂದರು.
ಕಾರ್ಯಾಗಾರದ ಅಧ್ಯಕ್ಷತೆಯ ಭಾಷಣದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಕಿಶೋರ್ ಕುಮಾರ್ ದುಬೆ ಅವರು ತಮ್ಮ ಭಾಷಣದಲ್ಲಿ ಉತ್ತಮ ಆರೋಗ್ಯ, ನೈರ್ಮಲ್ಯ ಮತ್ತು ಸಮತೋಲನ ಪೌಷ್ಠಿಕ ಆಹಾರದ ಪ್ರಾಮುಖ್ಯತೆಯನ್ನು ವಿವರಿಸಿದರು.
ಈ ಸಂದರ್ಭದಲ್ಲಿ ಡಾ.ಸಂಗೀತಾ ಹಾಲ್ಬಂಡೆ, ಡಾ.ಜಗನ್ನಾಥ್ ವಿ ಗೌಡ್ಗೆ, ಡಾ.ಮಹಮ್ಮದ್ ಸುಹೀಲ್ ಹುಸೇನ್, ಡಾ.ಮಹಾದೇವಪ್ಪ ಮಾಳ್ಗೆ, ಕಲ್ಬುರ್ಗಿಯ ಕೆ.ಎಸ್.ಸಿ.ಎಸ್.ಟಿ ಪ್ರಾದೇಶಿಕ ಕೇಂದ್ರದ ಯೋಜನಾ ಸಂಯೋಜಕ ವಿಶ್ವ ಪ್ರಸನ್ನ, ಮಹೇಶ್ ರೆಡ್ಡಿ ಹಾಗೂ ಸಿಬ್ಬಂದಿ ವರ್ಗ ಸೇರಿದಂತೆ ಅನೇಕ ಆಶಾ ಕಾರ್ಯಕರ್ತರು ಭಾಗವಹಿಸಿದ್ದರು.