ಬೀದರ್ | ಕೆರೆ ತುಂಬಿಸುವ ಯೋಜನೆ ಶೀಘ್ರದಲ್ಲೇ ಆರಂಭ : ಶಾಸಕ ಪ್ರಭು ಚವ್ಹಾಣ್
ಬೀದರ್ : 30 ಸಣ್ಣ ಕೆರೆಗಳು ಮತ್ತು 6 ಇಂಗು ಕೆರೆಗಳು ಸೇರಿ ಒಟ್ಟು 36 ಕೆರೆ ತುಂಬಿಸುವ ಯೋಜನೆಯ ತಯಾರಿ ಬಗ್ಗೆ ಮಾಹಿತಿ ಪಡೆದಿದ್ದು, ಆದಷ್ಟು ಬೇಗ ಈ ಯೋಜನೆ ಆರಂಭ ಮಾಡಲಾಗುವುದು ಎಂದು ಶಾಸಕ ಪ್ರಭು ಚೌವ್ಹಾಣ ಹೇಳಿದರು.
ಇಂದು ಕಮಲನಗರ್ ತಾಲ್ಲೂಕಿನ ಬಳತ್ (ಬಿ) ಗ್ರಾಮದ ವ್ಯಾಪ್ತಿಯಲ್ಲಿ ಸಂಚರಿಸಿ ಕೆರೆ ತುಂಬುವ ಯೋಜನೆ ಬಗ್ಗೆ ಮಾಹಿತಿ ಪಡೆದ ಅವರು, ಜಾಕ್ವೇಲ್, ಪಂಪ್‌ಹೌಸ್ ಮತ್ತು ವಿದ್ಯುತ್ ಉಪ ಕೇಂದ್ರದ ಸ್ಥಳ ವೀಕ್ಷಿಸಿ ಮಾತನಾಡಿದರು.
ಹಾಲಹಳ್ಳಿ ಬ್ಯಾರೇಜ್ ಮೇಲ್ಭಾಗದಲ್ಲಿ ಮಾಂಜ್ರಾ ನದಿಯಿಂದ 0.95 ಟಿ.ಎಂ.ಸಿ ನೀರನ್ನು ಎತ್ತಿ ಕೆರೆಗಳ ತುಂಬುವ ಯೋಜನೆ ಇದಾಗಿದೆ. ಔರಾದ್ (ಬಿ) ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿ ವರ್ಷ ಎದುರಾಗುವ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಮತ್ತು ನಮ್ಮ ರೈತರಿಗೆ ಅನುಕೂಲ ಕಲ್ಪಿಸಬೇಕು ಎಂಬ ಉದ್ದೇಶ ಈ ಯೋಜನೆಯದ್ದಾಗಿದೆ. ಸಾಕಷ್ಟು ಪ್ರಯತ್ನಪಟ್ಟು ಮುಖ್ಯಮಂತ್ರಿ ಮತ್ತು ಸಚಿವರ ಮೇಲೆ ಒತ್ತಡ ತಂದು 560 ಕೋಟಿ ರೂ. ಬೃಹತ್ ಮೊತ್ತದ ಯೋಜನೆ ತಂದಿದ್ದೇನೆ. ಔರಾದ್ (ಬಿ) ಇತಿಹಾಸದಲ್ಲಿಯೇ ಇದು ಅತಿ ದೊಡ್ಡ ಯೋಜನೆಯಾಗಿದ್ದು, ಕೆಲವೇ ದಿನಗಳಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದು ಹೇಳಿದರು.
ನಮ್ಮೆಲ್ಲರಿಗೆ ಅನ್ನ ನೀಡಿ ಪೋಷಿಸುವ ರೈತರ ಕೈ ಬಲಪಡಿಸಬೇಕು. ಅವರು ಆರ್ಥಿಕವಾಗಿ ಸದೃಢರಾಗಲು ಈ ಯೋಜನೆ ಮಹತ್ವದ ಪಾತ್ರ ವಹಿಸಲಿದೆ. ಅಧಿಕಾರಿಗಳು ಕೇವಲ ಕಚೇರಿಗೆ ಸೀಮಿತವಾಗದೇ ಸ್ಥಳಕ್ಕೆ ಭೇಟಿ ನೀಡಿ ವಾಸ್ತವಾಂಶ ಅರಿಯಬೇಕು. ನಾನು ಜಾಕ್ವೇಲ್, ಪಂಪ್‌ಹೌಸ್, ಪವರ್ ಸಬ್ ಸ್ಟೇಷನ್ ನಿರ್ಮಿಸುವ ಸ್ಥಳಕ್ಕೆ ಭೇಟಿ ನೀಡಿದ್ದು, ಮುಂದಿನ ದಿನಗಳಲ್ಲಿ ಕಾಮಗಾರಿ ನಡೆಯುವ ಎಲ್ಲ ಕಡೆಗಳಿಗೆ ಭೇಟಿ ನೀಡಲಿದ್ದೇನೆ ಎಂದು ಮಾಹಿತಿ ನೀಡಿದರು.
ಈ ವೇಳೆ ಕಾರಂಜಾ ಯೋಜನೆಯ ಕಾರ್ಯನಿರ್ವಾಹಕ ಇಂಜಿನಿಯರ್ ಸಂತೋಷ್ ಮಾಕಾ ಅವರು ಶಾಸಕರಿಗೆ ಯೋಜನೆಯ ಬಗ್ಗೆ ವಿವರಣೆ ನೀಡಿದರು.
ಈ ಸಂದರ್ಭದಲ್ಲಿ ಕೆಎನ್‌ಎನ್‌ಎಲ್ ಭಾಲ್ಕಿ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಜ್ಞಾನೇಶ್ವರ್ ಮಂಡೆ, ಜನವಾಡಾದ ಎಇಇ ಸಂಜುಕುಮಾರ್ ಹಳ್ಳೆ, ಮಾರುತೆಪ್ಪ, ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಕಿರಣ್ ಪಾಟೀಲ್, ಶಿವಕುಮಾರ್ ವಡ್ಡೆ, ಬಸವರಾಜ್ ಪಾಟೀಲ್, ಪ್ರವೀಣ್ ಕಾರಬಾರಿ, ಶಿವರಾಜ್ ಅಲ್ಮಾಜೆ, ಅಶೋಕ್ ಮೇತ್ರೆ, ಗಿರೀಶ್ ವಡೆಯರ್, ಸುಭಾಷ್, ಯೋಗೇಶ್ ಬಿರಾದಾರ್, ಸಂದೀಪ್ ಪಾಟೀಲ್, ಅನಿಲ್ ಹೊಳಸಮುದ್ರೆ ಹಾಗೂ ಭರತ ಕದಮ್ ಸೇರಿದಂತೆ ಇತರರು ಇದ್ದರು.