ಬೀದರ್ | ಮಹಾರಾಷ್ಟ್ರದಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯ ಜಪ್ತಿ; ವ್ಯಕ್ತಿಯ ಬಂಧನ
ಬೀದರ್ : ಮಹಾರಾಷ್ಟ್ರದಿಂದ ಅಕ್ರಮವಾಗಿ ಮದ್ಯ ಸಾಗಿಸುತಿದ್ದ ವೇಳೆ ದಾಳಿ ಅಬಕಾರಿ ಇಲಾಖೆ ಅಧಿಕಾರಿಗಳ ತಂಡ ದಾಳಿ ನಡೆಸಿ ಸಾವಿರಾರು ರೂ. ಮೌಲ್ಯದ ಮದ್ಯದ ಬಾಟಲ್ ಗಳು ಜಪ್ತಿ ಮಾಡಿಕೊಂಡು, ಓರ್ವ ಆರೋಪಿಯನ್ನು ಬಂಧಿಸಿದ ಘಟನೆ ಬಸವಕಲ್ಯಾಣ ತಾಲ್ಲೂಕಿನ ಮನ್ನಳ್ಳಿ ಕ್ರಾಸ್ ಬಳಿ ಗುರುವಾರ ನಡೆದಿದೆ.
ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಮೋನುನಾಯಕ್ ತಾಂಡಾದ ನಿವಾಸಿ ಮಿಥುನ್ ಮೋತಿರಾಮ್ ಬಂಧಿತ ಆರೋಪಿ ಎಂದು ತಿಳಿದುಬಂದಿದೆ.
ಮಹಾರಾಷ್ಟ್ರದ ಉಮ್ಮರ್ಗಾದಿಂದ ಬಸವಕಲ್ಯಾಣ ತಾಲ್ಲೂಕಿನ ಚಂಡಕಾಪೂರ ಗ್ರಾಮದ ಮಾರ್ಗವಾಗಿ ಕಾರಿನಲ್ಲಿ ಅಕ್ರಮವಾಗಿ ಮದ್ಯದ ಬಾಟಲ್ ಸಾಗಿಸುತ್ತಿದ್ದನು. ಮನ್ನಳ್ಳಿ ಕ್ರಾಸ್ ಬಳಿಯ ಅಬಕಾರಿ ಚೆಕ್ ಪೋಸ್ಟ್ ನಲ್ಲಿ ವಾಹನ ತಪಾಸಣೆ ವೇಳೆ ಈತ ಸಿಕ್ಕಿಬಿದ್ದಿದ್ದಾನೆ. ಆರೋಪಿಯಿಂದ ಸಾವಿರಾರು ರೂ. ಮೌಲ್ಯದ ಮದ್ಯದ ಬಾಟಲ್ ಹಾಗೂ ಮದ್ಯ ಸಾಗಿಸುತಿದ್ದ ಕಾರು ವಶಕ್ಕೆ ಪಡೆದು, ಆರೋಪಿಯನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
ಕಾರ್ಯಾಚರಣೆ ವೇಳೆ ಬೀದರ್ ನ ಅಬಕಾರಿ ಇಲಾಖೆಯ ಉಪ ಆಯುಕ್ತ ರವಿಶಂಕರ್ ಎ., ಉಪ ಅಧಿಕ್ಷಕ ಆನಂದ್ ಉಕಳಿ, ಬಸವಕಲ್ಯಾಣದ ವಲಯ ನಿರೀಕ್ಷಕ ನಾನಾಗೌಡ ಕೇರೂರ್ ಹಾಗೂ ಪಿಎಸ್ಐ ಪೂಜಾ ಖರ್ಗೆ ಸೇರಿದಂತೆ ಇಲಾಖೆಯ ಇನ್ನಿತರ ಸಿಬ್ಬಂದಿ ಭಾಗವಹಿಸಿದ್ದರು.