ಬೀದರ್ | ಬಸವೇಶ್ವರ ಎಂಟರ್ ಪ್ರೈಸಸ್ ಮೇಲೆ ಸುಳ್ಳು ಆರೋಪ ಮಾಡುತ್ತಿರುವುದು ಸರಿಯಲ್ಲ : ಬಾಬು ಪಾಸ್ವಾನ್
ಬೀದರ್ : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯಗಳಿಗೆ ಆಹಾರ ಮತ್ತು ಇತರ ಸಾಮಗ್ರಿಗಳು ಸರಬರಾಜು ಮಾಡುತ್ತಿರುವ ಬಸವೇಶ್ವರ ಬೀದರ್ ಮೇಲೆ ಕೆಲವೊಬ್ಬರು ಸುಳ್ಳು ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಬಾಬು ಪಾಸ್ವಾನ್ ಅವರು ಹೇಳಿದರು.
ಇಂದು ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಬಸವೇಶ್ವರ ಎಂಟರ್ ಪ್ರೈಸಸ್ ಸಂಸ್ಥೆಯವರು ವಸತಿ ನಿಲಯಗಳಿಗೆ ಉತ್ತಮ ರೀತಿಯಲ್ಲಿ ಆಹಾರ ಧಾನ್ಯ ಮತ್ತು ಇತರ ಸಾಮಗ್ರಿಗಳು ಒದಗಿಸುತ್ತಿದ್ದಾರೆ. ಆದರೆ ಇದನ್ನು ಸಹಿಸದ ಕೆಲವರು ಬಸವೇಶ್ವರ ಎಂಟರ್ ಪ್ರೈಸಸ್ ಅನ್ನು ಕಪ್ಪು ಪಟ್ಟಿಗೆ ಸೇರಿಸಿ ಎಂದು ಹೇಳುತ್ತಿದ್ದಾರೆ. ಈ ಕ್ರಮವು ಸರಿಯಲ್ಲ ಎಂದರು.
ಸಂಸ್ಥೆಯವರು ಆಹಾರಧಾನ್ಯ ಸರಬರಾಜು ಮಾಡಿ, ದರಪಟ್ಟಿಯ ಪ್ರಕಾರ ಬಿಲ್ಲುಗಳನ್ನು ಇಲಾಖೆಗೆ ಸಲ್ಲಿಸಿರುತ್ತಾರೆ. ಆದರೆ 2022ನೇ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಆಹಾರ ಧಾನ್ಯಗಳ ಬಿಲ್ಲಿನಲ್ಲಿ ದರ ವ್ಯತ್ಯಾಸವಾಗಿದೆ ಎಂದು ಹೆಚ್ಚುವರಿಯಾಗಿ ಪಾವತಿಸಿರುವ 13,81, 383 ರೂ. ಸರಕಾರಕ್ಕೆ ಜಮೆ ಮಾಡುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿಗಳು ತಿಳಿಸಿರುವುದು ಕಂಡು ಬಂದಿದೆ.
ಈ ಬಗ್ಗೆ ನಾವು ಇಲಾಖೆಗೆ ಹೋಗಿ ವಿಚಾರಣೆ ನಡೆಸಿದಾಗ ಸಂಸ್ಥೆಯವರಿಗೆ ಬರಬೇಕಾದ 2022ನೇ ವರ್ಷದ ಸೆಪ್ಟೆಂಬರ್ ತಿಂಗಳ ಒಟ್ಟು ಬಿಲ್ಲಿನ ಮೊತ್ತ 30,14,570 ರೂ. ಗಳಲ್ಲಿ 16,30,523 ರೂ. ಎರಡು ವರ್ಷ ವಿಳಂಬದ ನಂತರ ಪಾವತಿ ಮಾಡಲಾಗಿದೆ. ಇನ್ನುಳಿದ ಹಣವು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿಯೇ ಇರುವುದು ಕೂಡ ಕಂಡುಬಂದಿದೆ. ಸಂಸ್ಥೆಯವರಿಗೆ ಇಲಾಖೆಯಿಂದ ಯಾವುದೇ ರೀತಿಯಿಂದ ಹೆಚ್ಚುವರಿಯಾಗಿ ಹಣ ಪಾವತಿಯಾಗಿಲ್ಲ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ನಾಗೇಶ್, ರಾಜಕುಮಾರ್ ಶೇರಿಕಾರ್, ರಮೇಶ್ ಹಾಗೂ ಶಿವರಾಜ್ ಇದ್ದರು.