ಬೀದರ್ | ಸಮೀಕ್ಷೆಯಲ್ಲಿ ಕಡ್ಡಾಯವಾಗಿ ಮರಾಠಾ ಎಂದು ನಮೂದಿಸಿ : ಪದ್ಮಾಕರ್ ಪಾಟೀಲ್
ಬೀದರ್ : ರಾಜ್ಯ ಸರ್ಕಾರ ಸೆ.22ರಿಂದ ಅ.7ರವರೆಗೆ ನಡೆಸಲಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ, ಧರ್ಮ ಕಾಲಂನಲ್ಲಿ ಹಿಂದು, ಜಾತಿ ಕಾಲಂನಲ್ಲಿ ಮರಾಠಾ, ಉಪಜಾತಿ ಕಾಲಂನಲ್ಲಿ ಕುನಬಿ ಮತ್ತು ಮಾತೃಭಾಷೆ ಕಾಲಂನಲ್ಲಿ ಮರಾಠಿ ಎಂದು ಕಡ್ಡಾಯವಾಗಿ ನಮೂದಿಸಬೇಕು ಎಂದು ಸಕಲ ಮರಾಠಾ ಸಮಾಜದ ಅಧ್ಯಕ್ಷ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಪದ್ಮಾಕರ್ ಪಾಟೀಲ್ ಅವರು ಕರೆ ನೀಡಿದರು.
ಬುಧವಾರ ನೌಬಾದ್‌ನಲ್ಲಿರುವ ಮರಾಠಾ ಸಮುದಾಯ ಭವನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಸಮೀಕ್ಷಾಧಿಕಾರಿ ಅಥವಾ ಶಿಕ್ಷಕರು ಮನೆಗೆ ಬಂದಾಗ ನಿಜವಾದ ಮಾಹಿತಿಯನ್ನು ಸ್ಪಷ್ಟವಾಗಿ ನೀಡಬೇಕು. ಸಮೀಕ್ಷೆಯಲ್ಲಿ 60 ಪ್ರಶ್ನೆಗಳಿರುತ್ತವೆ, ಪ್ರತಿಯೊಂದಕ್ಕೂ ಸರಿಯಾದ ಉತ್ತರ ನೀಡಬೇಕು ಎಂದು ಸಲಹೆ ನೀಡಿದರು.
ಮರಾಠಾ ಕ್ರಾಂತಿ ಮೋರ್ಚಾ ಸಂಯೋಜಕ ವೆಂಕಟ ಮೆಯಿಂದೆ ಮಾತನಾಡಿ, ರಾಜ್ಯದಲ್ಲಿ ನಮ್ಮ ಸಮಾಜ ಬಾಂಧವರು 40 ಲಕ್ಷ ಜನ ಇದ್ದರೂ, ಸರ್ಕಾರದ ದಾಖಲೆಗಳಲ್ಲಿ ಕೇವಲ 16 ಲಕ್ಷ ಜನ ಮಾತ್ರ ಎಂದು ತೋರಿಸಲಾಗಿದೆ. ಬೀದರ್ ಜಿಲ್ಲೆಯಲ್ಲಿ ಮಾತ್ರ 3.5 ಲಕ್ಷ ಜನರಿದ್ದಾರೆ. ಈ ನಿಜ ಸಂಗತಿ ಹೊರಬರುವುದಕ್ಕೆ ಸಮೀಕ್ಷೆಯಲ್ಲಿ ಶೇ.100ರಷ್ಟು ಪಾಲ್ಗೊಳ್ಳಬೇಕು. ಸರ್ಕಾರದ ಸೌಲಭ್ಯಗಳು ಜನಗಣತಿ ಆಧಾರದ ಮೇಲೆ ನಿಂತಿವೆ” ಎಂದು ಒತ್ತಾಯಿಸಿದರು.
ಡಿಗಂಬರರಾವ್ ಮಾನಕಾರಿ ಮಾತನಾಡಿದರು.
ಸಭೆಯಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಅಶೋಕ್ ಸೊಂಜೆ, ಮಾಜಿ ಜಿ.ಪಂ ಅಧ್ಯಕ್ಷ ಬಾಬುರಾವ್ ಕಾರಾಬಾರಿ, ಅನಿಲ್ ಭುಸಾರೆ, ಪ್ರಕಾಶ್ ಪಾಟೀಲ್, ಜನಾರ್ಧನ್ ಬಿರಾದಾರ್, ವಿಜಯಕುಮಾರ್ ಪಾಟೀಲ್ ಕಣಜಿಕರ್, ಸತೀಶ್ ಮುಳೆ, ಅನಿಲ್ ಶಿಂಧೆ, ಡಾ.
ದಿನಕರ್ ಮೋರೆ, ರಾಮರಾವ್ ವರವಟ್ಟಿಕರ್, ಕಿಶಾನರಾವ್ ಪಾಟೀಲ್ ಇಂಚುರಕರ್, ತಾತ್ಯಾರಾವ್ ಪಾಟೀಲ್, ಅನಿಲ್ ಕಾಳೆ, ಪಂಚಶೀಲ್ ಪಾಟೀಲ್, ಶಿವಾಜಿರಾವ್ ಪಾಟೀಲ್ ಮುಂಗನಾಳ್, ಡಿ.ಜಿ. ಜಗತಾಪ್, ಮಾಧವರಾವ್ ಕಾದೆಪುರಕರ್, ನಾರಾಯಣ ಗಣೇಶ್, ಸತೀಶ್ ವಾಸರೆ ಸೇರಿದಂತೆ ಸಮುದಾಯದ ಅನೇಕ ಮುಖಂಡರು ಉಪಸ್ಥಿತರಿದ್ದರು.